ಪಶ್ಚಿಮ ಘಟ್ಟ ವಾಯ್ಸ್ :-ಬೆಂಗಳೂರು: ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 35 ಸಾವಿರ ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣದಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿ, ಮಾತನಾಡಿದ ಸಿಎಂ, ಪ್ರಕೃತಿ ಸಹಾಯವಿಲ್ಲದಿದ್ದರೆ, ಸರ್ಕಾರ ಏನು ಪರಿಹಾರ ಕೊಟ್ಟರು ಸಾಕಾಗುವುದಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಈ ವೈಪರೀತ್ಯ ಕಾಣುತ್ತಿದ್ದೇವೆ. ಮುಂಗಾರಿನಲ್ಲಿ ಒಳ್ಳೆ ಮಳೆಯಾಗುವ ನಿರೀಕ್ಷೆ ಇದೆ. 2024 ರಲ್ಲಿ ಒಳ್ಳೆಯ ಮಳೆ ಬೆಳೆ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.
ಅಭಿವೃದ್ಧಿ ನಿರೀಕ್ಷಿತ ಫಲ ಕಾಣಲು ಸಮೃದ್ಧಿಯಾಗಿ ಮಳೆಯಾಗಲಿ. ಶೇ. 60ಕ್ಕೂ ಹೆಚ್ಚು ಜನ ವ್ಯವಸಾಯದ ಮೇಲೆ ಅವಲಂಬಿತರಾಗಿದ್ದಾರೆ. ಗ್ಯಾರಂಟಿಗಳನ್ನು ಕೊಟ್ಟಿದ್ದರಿಂದ ಬರದ ತೀವ್ರತೆ ಕಡಿಮೆಯಾಗಿದೆ. ಬಡವರ ಕುಟುಂಬಕ್ಕೆ ಹಣ ದೊರೆಯುತ್ತಿದ್ದು, ಕೊಳ್ಳುವ ಶಕ್ತಿ ಇದೆ. ಬರಗಾಲವಿದ್ದರೂ ಸ್ವಲ್ಪ ಮಟ್ಟಿಗೆ ಅದರ ತೀವ್ರತೆ ಕಡಿಮೆಯಾಗಿದೆ. ಇಲ್ಲದಿದ್ದರೆ ಹಾಹಾಕಾರ ಶುರುವಾಗುತ್ತಿತ್ತು. ಸಾರ್ವತ್ರಿಕ ಮೂಲ ಆದಾಯದ ತತ್ವದ ತಳಹದಿಯ ಮೇಲೆ ಜನರ ಆದಾಯ ಹೆಚ್ಚಿಸಿ ಆರ್ಥಿಕ ಚಟುವಟಿಕೆಗಳಿಗೆ ಇಂಬು ದೊರೆತಿದೆ ಎಂದರru
ರಾಜ್ಯದ ಜನರ ಅಭಿವೃದ್ಧಿಗಾಗಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರ ಆಡಳಿತ ವರ್ಗವನ್ನು ಆಯ್ಕೆ ಮಾಡಿದೆ. ಜನಪರ, ಸಮಾಜಮುಖಿ ಧೋರಣೆ ಇದ್ದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಮತ್ತು ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದರು.
ಸಂವಿಧಾನ ಅರಿತು ಅದರಂತೆ ನಡೆಯಬೇಕಿದೆ. ಈ ದಿಕ್ಕಿನಲ್ಲಿ ಪ್ರಯತ್ನ ಮಾಡೋಣ. ಜನರ ನಿರೀಕ್ಷೆ ಹುಸಿಯಾಗದ ರೀತಿ ಕೆಲಸ ಮಾಡೋಣ. 2024ನೇ ವರ್ಷಕ್ಕೆ ನಾವೆಲ್ಲರೂ ಕಾಲಿಡುತ್ತಿದ್ದು, ಈ ವರ್ಷ ರಾಜ್ಯಕ್ಕೆ ಆಶಾದಾಯಕವಾಗಿದೆ ಎಂದು ಸಿಎಂ ಹೇಳಿದರು.