PGK NEWS (ಪಶ್ಚಿಮ ಘಟ್ಟ ವಾಯ್ಸ್) ಚಿಕ್ಕಮಗಳೂರು, ಜನವರಿ : ಘಜನಿ, ಘೋರಿ, ಬಾಬರ್ ಮಾನಸಿಕತೆ ಬಹಳ ಅಪಾಯಕಾರಿ. ಇಲ್ಲಿನ ಮುಸ್ಲಿಮರು (Indian Muslims) ಅದರಿಂದ ಹೊರ ಬರಬೇಕು ಎಂದು BJP ನಾಯಕ ಸಿಟಿ ರವಿ (CT Ravi) ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಘಜನಿ, ಕಿಲ್ಜಿ, ಘೋರಿ, ಔರಂಗಜೇಬ್, ಮೊಘಲರು, ಟಿಪ್ಪು ಕಾಲದಲ್ಲಿ 42 ಸಾವಿರ ದೇಗುಲ ಧ್ವಂಸ ಮಾಡಲಾಗಿತ್ತು. ಭಾರತೀಯ ಮುಸಲ್ಮಾನರು ಆ ದಾಳಿಕೋರರ ಜೊತೆ ತಮ್ಮ ಅಸ್ಮಿತೆಯನ್ನ ಗುರುತಿಸಿಕೊಳ್ಳುವುದಿಲ್ಲ. ಎಲ್ಲಾ ಮುಸ್ಲಿಮರನ್ನು ಒಂದೇ ತಕ್ಕಡಿಯಲ್ಲಿಟ್ಟು ನಾವು ನೋಡುವುದಿಲ್ಲ. ಇಲ್ಲಿನ ಮುಸ್ಲಿಮರಿಗೆ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಆದರ್ಶವಾಗಬೇಕು. ಆಗ ನಮ್ಮಲ್ಲಿ ಸಹೋದರತ್ವ ಭಾವನೆ ಗಟ್ಟಿಯಾಗುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ಮುಸಲ್ಮಾನರು ಆ ದಾಳಿಕೋರರ ಜೊತೆ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದಿಲ್ಲ. ಇವರು ಭಾರತೀಯ ಸನಾತನ ಪರಂಪರೆಗೆ ವಿಶ್ವಾಸವಿಟ್ಟು ಭಾರತದಲ್ಲಿ ಉಳಿದುಕೊಂಡಿದ್ದಾರೆ. ಅವರಿಗೂ ಮನಃಪರಿವರ್ತನೆಯ ದಿನ ಬರಬಹುದು. ಮಂದಿರ ಕೆಡವಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದ್ರೆ ಅದು ಹರಾಮ್ ಆಗುತ್ತೆ ಅನ್ನಿಸಬಹುದು. ಹರಾಮ್ ಆಗುತ್ತೆ ಅನ್ನಿಸಿದ ದಿನ ಅವರು ಉದಾರತೆಯನ್ನು ಪ್ರದರ್ಶನ ಮಾಡಬಹುದು ಎಂದು ರವಿ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿಟಿ ರವಿ, ಹಿರಿಯರು ಮತ್ತು ಸ್ಥಾನಕ್ಕೆ ಕೊಡಬೇಕಾದ ಗೌರವ ಕೊಡಲೇಬೇಕು. ಹೆಗಡೆಯವರ ಕಾರ್ಯಶೈಲಿ ಭಿನ್ನವಿದೆ. ಹಾಗಂತ ಮತ್ತೊಬ್ಬರನ್ನ ನೋಯಿಸಬಾರದು. ಅವರ ಹೇಳಿಕೆಯನ್ನ ನಾವು ಸಮರ್ಥಿಸಿಕೊಳ್ಳುವುದಿಲ್ಲ. ರಾಮ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವನು. ಅವರು ಏಕವಚನದಲ್ಲಿ ಮಾತನಾಡಿರುವುದ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ
ಯಾರೇ ಆದರೂ ಏಕವಚನದಲ್ಲಿ ಮಾತನಾಡುವುದು, ಅಗೌರವದಿಂದ ನಡೆದುಕೊಳ್ಳುವುದನ್ನು ನಾವು ಒಪ್ಪುವುದಿಲ್ಲ. ಮಾತನಾಡುವ ಭರದಲ್ಲಿ ಶಿವರಾಜ್ ತಂಗಡಗಿಯವರು ನಾಯಿಗೆ ಹೋಲಿಸಿರುವುದು ಕೂಡ ತಪ್ಪೇ. ಪ್ರಧಾನಿ ಮೋದಿ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ ಈ ಹಿಂದೆ ಏಕವಚನದಲ್ಲಿ ಮಾತನಾಡಿದ್ದು ಕೂಡ ಸರಿಯಲ್ಲ. ‘ಅವ್ನು ಹೋಗಿದ್ನ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ’ ಎಂದು ಪ್ರಧಾನಿಯನ್ನು ಸಿದ್ದರಾಮಯ್ಯನವರು ಕೇಳಿದ್ದರು. ಹಿರಿಯರಾಗಿ, ಹೇಳುವಂಥವರಾಗಿ ಅವರೇ ಪ್ರಧಾನಿಗೆ ಏಕವಚನದಲ್ಲಿ ನಿಂದಿಸುವುದು ಎಷ್ಟು ಸರಿ. ಹಿರಿಯರು ದೊಡ್ಡತನದಲ್ಲಿ ನಡೆದುಕೊಳ್ಳಬೇಕು, ಆಗ ಉಳಿದವರಿಗೆ ಮಾದರಿಯಾಗಲಿದೆ ಎಂದು ರವಿ ಅಭಿಪ್ರಾಯಪಟ್ಟಿದ್ದಾರೆ.