PGK NEWS(ಪಶ್ಚಿಮ ಘಟ್ಟ ವಾಯ್ಸ್): ಅಂದು ನಮ್ಮ ಊರುಗಳಲ್ಲಿ ವರ್ಷಕ್ಕೆ ಮೂರು ನಾಲ್ಕು ತಿಂಗಳು ಸುರಿಯುತ್ತಿದ್ದ ಮಳೆ ಇಂದು ಮೂರರಿಂದ ಮೂವತ್ತು ದಿನಗಳಿಗೆ ಇಳಿದಿದೆ.
ಅಂದು 25 ರಿಂದ 30 ಡಿಗ್ರಿವರೆಗು ಇದ್ದ ನಮ್ಮೂರಿನ ತಾಪಮಾನ ಇಂದು 35 ರಿಂದ 45 ಡಿಗ್ರಿಯ ಗಡಿ ದಾಟಿ ಓಡಲಾರಂಬಿಸಿದೆ ಇದಕ್ಕೆ ಕಾರಣ ಅರಣ್ಯ ನಾಶ.
ಇಂದಿನ ಆಧುನಿಕ ಯುಗದಲ್ಲಿ ಜಗತ್ತನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಪರಿಸರ ನಾಶವು ಒಂದು.
ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರ. ಮನೆಗೊಂದು ಗಿಡ ಊರಿಗೊಂದು ವನ ಎಂಬ ಮಾತಿನಂತೆ ಮನೆ ಮನೆಯಲ್ಲಿ ಗಿಡವನ್ನು ನೆಟ್ಟರೇನ ಹಸಿರು ಉಸಿರಾಡುವುದು. ಆದರೆ ಇಂದು ಮರವನ್ನು ಕಡಿಯುವುದೇ ಅಧಿಕವಾಗಿದೆಯೇ ವಿನಃ ನಡುಯುವುದಲ್ಲ. ಹಾಗಾಗಿ ಸೂರ್ಯನು ತಾಪಮಾನ ಅಧಿಕವಾಗಿಸಿ ಬೆವರಿಳಿಸಿ ಬಿಡುತ್ತಿದ್ದಾನೆ. ಇಂಗಾಲದ ಡೈ ಆಕ್ಸೈಡ್ ಅಧಿಕವಾಗಿ ಓಜೋನ್ ಪದರವೂ ಹರಿದು ಹೋಗಿದೆ. ನಗರ ಪ್ರದೇಶಗಳಲ್ಲಿ ವಾಹನದ ದಟ್ಟಣೆಯಿಂದ ಬರುತ್ತಿರುವ ಹೊಗೆಯ ಪ್ರಮಾಣ, ಕಾರ್ಖಾನೆಗಳಿಂದ ಹೊರಗೆ ಬರುತ್ತಿರುವ ವಿಷಕಾರಿ ಅನಿಲ, ಅಲ್ಲದೇ ಬಹುಮಹಡಿ ಕಟ್ಟಡಗಳು ವರುಷದಿಂದ ವರಷಕ್ಕೆ ಎರಡು ಮೂರು ಪಟ್ಟು ತಲೆ ಎತ್ತುತಲಿವೆ. ಹಾಗೆಯೇ ರಸ್ತೆ ಅಗಲೀಕರಣವೆಂಬ ನೆಪವೊಡ್ಡಿ ಬೀದಿ ಬದಿಗಳಲ್ಲಿನ ಸಾಲುಮರಗಳ ಮಾರಣ ಹೋಮ ನಡೆಯುತ್ತಿದೆ.
ಸುತ್ತಮುತ್ತಲೂ ವೈವಿಧ್ಯಮಯವಾದ
ನಿಸರ್ಗದ ಸೊಬಗಿದೆ. ಹಲವಾರು ಗಿಡ ಮರಗಳಿವೆ. ವಿವಿಧ ಪ್ರಕಾರದ ಪ್ರಾಣಿ ಪಕ್ಷಿಗಳಿಗೆ. ಅನೇಕ ಸೂಕ್ಷ್ಮಜೀವಿಗಳಿವೆ. ಗುಡ್ಡ,ಬೆಟ್ಟ, ದೊಡ್ಡ ದೊಡ್ಡ ಪರ್ವತ ಶಿಖರಗಳು ಇದೆ. ಆದರೆ ವಿಜ್ಞಾನ,ತಂತ್ರಜ್ಞಾನ, ಅಭಿವೃದ್ಧಿ, ಆಧುನಿಕತೆ, ನಗರೀಕರಣ, ಕೈಗಾರೀಕರಣ ಎಂಬ ಹಲವು ಕಾರಣಗಳಿಗಾಗಿ ಅನೇಕ ರೀತಿಯಲ್ಲಿ ಅರಿತೋ ಅರಿಯದೆಯೋ ಪರಿಸರಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತಿದ್ದೇವೆ.
ನಾವು ನಮ್ಮ ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ಕಡಿದು ಹಾಕುತ್ತಿದ್ದೇವೆ. ಇದರಿಂದಾಗಿ ಹಸಿರು ಎಂಬುದು ಎಲ್ಲಿಯೂ ಕಾಣ ಸಿಗುವುದಿಲ್ಲ. ಮನುಷ್ಯನ ಅತಿ ಆಸೆ, ಏರುತ್ತಿರುವ ಜನಸಂಖ್ಯೆ ಜೀವನದ ಬಯಕೆಗಳು ಪರಿಸರವನ್ನು ಹಾಳು ಮಾಡುತ್ತಿದೆ. ನಮ್ಮ ಸುತ್ತಮುತ್ತಲಿನ ನೀರು, ಗಾಳಿ ಎಲ್ಲವೂ ಕಲುಷಿತಗೊಳ್ಳುತ್ತಿದೆ. ಪರಿಸರ ಪ್ರೇಮಿಗಳು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನ ಮಾಡುತ್ತಲೇ ಬಂದಿದೆ. ಇಂದು ಕೇವಲ ಮನುಕುಲಕ್ಕಷ್ಟೇ ಅಲ್ಲದೆ ಇಡೀ ವಿಶ್ವದ ಜೀವ ಸಂಕುಲಕ್ಕೆ ಮರಕವಾಗುತ್ತಲೇ ಇದೆ. ಆರೋಗ್ಯಕರ ಜೀವನಕ್ಕೆ ಅತೀ ಅಗತ್ಯವಾದ ಗಾಳಿ, ನೀರು, ಆಹಾರ ವಿಷಪೂರಿತವಾಗುತ್ತಿದೆ.
ಕಾಡು ಬೆಳೆಸಿ ನಾಡು ಉಳಿಸಿ ಎಂಬ ಮಾತಿನಂತೆ ಅರಣ್ಯನಾಶದಿಂದ ಪ್ರಾಣಿ ಸಂಕುಲ ನಾಶ, ಹವಾಮಾನ ವೈಪರೀತ್ಯ, ಬರಗಾಲ, ಜಲಮೂಲಗಳ ನಾಶ, ಇದರಿಂದ ನಾನಾ ಕಾಯಿಲೆಗಳ ತವರಾಗಿ ಮಾನವ ಹಾಗೂ ಪ್ರಾಣಿ ಸಂಕುಲಗಳ ಬದುಕು ದುರ್ಬರವಾಗುತಿದೆ.
ವನಮಾತೆಗೆ ಕೃತಘ್ನರಾಗುವ ಬದಲು ಮರಗಳನ್ನು ಕಡಿದು ಅವಳ ಗರ್ಭಪಾತಕ್ಕೆ ಕಾರಣವಾಗುವುದಲ್ಲದೆ ತಮ್ಮ ಅಳಿವಿಗು ಕೆಲವು ಸ್ವಾರ್ಥ ಜನರು ನಾಂದಿ ಹಾಡುತ್ತಾ ಇದ್ದಾರೆ. ಪ್ರತಿಯೊಬ್ಬರಲ್ಲು ಪ್ರಕೃತಿಯನ್ನು ಪ್ರೀತಿಸುವ, ರಕ್ಷಿಸುವ, ಉಳಿಸಿ ಬೆಳೆಸುವ ಮನೋಭಾವ ಮೂಡಿ ಕಾರ್ಯಪ್ರವತ್ತರಾಗಬೇಕಾಗಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಹಿತವಾದ ಬದುಕಿನ ವಾತಾವರಣವನ್ನು ಉಳಿಸುವ ದಿಕ್ಕಿನಲ್ಲಿ ನಮ್ಮ ಪಯಣ ಸಾಗಬೇಕಾಗಿದೆ.
ಆದ್ದರಿಂದ "ತಲೆಗೊಬ್ಬರು ಒಂದೊಂದು ಗಿಡ ನೆಟ್ಟು ಖುಷಿ ಪಡೋಣ, ಮನುಕುಲವನ್ನು ಉಳಿಸೋಣ !