PGK NEWS (ಉತ್ತರಕನ್ನಡ )ಸಂಸದರ ಬದಲಾವಣೆ ಕೂಗು:ಅನಂತಕುಮಾರ ಹೆಗಡೆಗೆ ಸಂಕಟ!


PGK NEWS  ಪಶ್ಚಿಮಘಟ್ಟ ವಾಯ್ಸ್
  
ಉತ್ತರಕನ್ನಡ ಬಿಜೆಪಿ ಭದ್ರಕೋಟೆ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಸುದ್ದಿಯು ಚುನಾವಣಾ ಕಣ ಈಗಲೇ ರಂಗೇರುವಂತೆ ಮಾಡಿದೆ.

ಚುನಾವಣೆ ಸಮೀಪವಿರುವಾಗ ಸಾರ್ವಜನಿಕವಾಗಿ ಕಾಣಿಸಿಕೊಂಡು ಜನ ಹಾಗೂ ಹೈಕಮಾಂಡ್ ಗಮನಸೆಳೆಯಲು ಸಂಸದ ಅನಂತಕುಮಾರ ಹೆಗಡೆ ತಮ್ಮ ಹರಿತ ಹೇಳಿಕೆಗಳನ್ನು ಹರಿಬಿಡುತ್ತಿದ್ದರೆ, ಇದೇ ಸಂಸದರ ನಿಷ್ಕಿçಯತೆಯನ್ನು ಜನರೆದುರು ಇಟ್ಟು ಈ ಬಾರಿ ಗೆಲುವು ಸಾಧಿಸಲು ಕಾಂಗ್ರೆಸ್ ತೆರೆಮರೆಯ ಪ್ರಯತ್ನಕ್ಕೆ ಮುಂದಾಗಿದೆ.
ಉತ್ತರಕನ್ನಡ ಜಿಲ್ಲೆಯ ಆರು ಹಾಗೂ ಬೆಳಗಾವಿಯ ಕಿತ್ತೂರು, ಖಾನಾಪುರ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ
ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರೂವರೆ ದಶಕಗಳಿಂದ ಬಿಜೆಪಿಯದ್ದೇ ಪಾರುಪತ್ಯ. ಹಿಂದೂತ್ವದ ಫೈರ್ ಬ್ರಾಂಡ್ ಅನಂತಕುಮಾರ ಹೆಗಡೆ ಕಳೆದ 7 ಲೋಕಸಭಾ ಚುನಾವಣೆ ಪೈಕಿ  6ರಲ್ಲಿ ಗೆಲುವು ಕಂಡವರು. ಚುನಾವಣೆ ಬಂದಾಗಲೆಲ್ಲ ಅವರಿಗೆ ಟಿಕೆಟ್ ಕನ್ಫರ್ಮ್ ಎಂಬುದು ಬಿಜೆಪಿ ಸೇರಿದಂತೆ ಎದುರಾಳಿಗಳಿಗೂ ತಿಳಿದ ವಿಷಯವಾಗಿರುತ್ತಿತ್ತು. ಆದರೆ ಈ
ಬಾರಿ ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆ ಗುಲ್ಲು ಜೋರಾಗಿದ್ದು ಪ್ರಬಲ ಆಕಾಂಕ್ಷಿಗಳ ಪಟ್ಟಿ ಕೂಡ ದೊಡ್ಡದಾಗಿದೆ.
ಸಿದ್ದರಾಮಯ್ಯ ಟಾರ್ಗೆಟ್:
ಈ ವಿದ್ಯಮಾನದ ಬೆನ್ನಲ್ಲೇ ಕ್ಷೇತ್ರದಾದ್ಯಂತ ಹೆಚ್ಚು ಓಡಾಟ ನಡೆಸಿರುವ ಅನಂತಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿಯೇ ಟೀಕಿಸಿ ಧಾರ್ಮಿಕ ಭಾವನೆಗಳನ್ನು ಕೆದಕಿ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. 2005ರ ಲೋಕಸಭಾ ಚುನಾವಣೆ ವೇಳೆಯೂ ಕೊನೆ ಗಳಿಗೆಯಲ್ಲಿ ಅಖಾಡಕ್ಕೆ ಇಳಿದಿದ್ದ ಹೆಗಡೆ ಇದೇ ರೀತಿ ಧಾರ್ಮಿಕ ಭಾವನೆಗಳನ್ನು ಕೆದಕಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಆದರೆ ಈ ಬಾರಿ ಮಾತೇ ಮುಳುವಾದಂತಿದೆ. ಅವರ ಟೀಕೆಗಳನ್ನು ಬಿಜೆಪಿಯವರು ಕೂಡ ಸಹಿಸುತ್ತಿಲ್ಲ. ಕಾರ್ಯಕರ್ತರ ಕೈಗೆ ಸಿಗದಂತಾದ ಅವರ ಬದಲು ನಿಷ್ಠಾವಂತರಿಗೆ ಟಿಕೆಟ್ ನೀಡಲು ಬಹಿರಂಗವಾಗಿಯೇ ಒತ್ತಾಯಗಳು ಕೇಳಿಬಂದಿವೆ. ಕ್ಷೇತ್ರಕ್ಕೆ ಇಷ್ಟು ವರ್ಷ ಹೇಳಿಕೊಳ್ಳುವ ಯಾವುದೇ ಅನುದಾನ, ಯೋಜನೆ ತಾರದ ಸಂಸದರ ಬದಲಾವಣೆ ಕೂಗು ಗಟ್ಟಿಯಾಗಿದೆ.
ಇದೇ ಕಾರಣಕ್ಕೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಕೂಡ ದೊಡ್ಡದಾಗಿದೆ. ಮಾಜಿ ಸ್ಪೀಕರ್, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ವಾಗ್ಮೀ ಚಕ್ರವರ್ತಿ ಸೂಲಿಬೆಲೆ, ವಕೀಲ ನಾಗರಾಜ ನಾಯ್ಕ ಸೇರಿದಂತೆ ಹಲವರು ಆಕಾಂಕ್ಷಿಗಳೆಂದೇ ಹೇಳಲಾಗುತ್ತಿದೆ.

ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್
1999ರಲ್ಲಿ ಸಂಸದರಾಗಿದ್ದ ಮಾರ್ಗರೇಟ್ ಆಳ್ವಾ ಬಳಿಕ ಬಣ ರಾಜಕೀಯದಿಂದಾಗಿ ಸತತವಾಗಿ ಸೋಲನ್ನು ಕಂಡಿರುವ ಕಾಂಗ್ರೆಸ್ ಈ ಬಾರಿ ಕೆನರಾ ಕ್ಷೇತ್ರವನ್ನು ಮರಳಿ ಪಡೆಯುವ ಲೆಕ್ಕಾಚಾರಕ್ಕೆ ಮುಂದಾಗಿದೆ. ಸಂಸದರ ನಿಷ್ಕ್ರಿಯತೆಯನ್ನೇ ಬಂಡವಾಳವನ್ನಾಗಿಸಿಕೊಂಡು ಬಿಜೆಪಿ ಹಣಿಯಲು ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಆರ್.ವಿ.ದೇಶಪಾಂಡೆ ಅವರನ್ನು ಅಭ್ಯರ್ಥಿಯನ್ನಾಗಿಸುವ ಪ್ರಯತ್ನ ನಡೆದಿತ್ತಾದರೂ ಅವರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿಗೆ ಹಾರಿ ಇದೀಗ ಪುನಃ ಕಾಂಗ್ರೆಸ್‌ಗೆ ಬರಲು ಮುಂದಾಗಿದ್ದಾರೆನ್ನಲಾಗುತ್ತಿರುವ ಶಿವರಾಮ್ ಹೆಬ್ಬಾರ್ ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿದೆ. ಇದಲ್ಲದೆ ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಅರಣ್ಯ ಅತಿಕ್ರಮಣದಾರರ ಪರ ಹೋರಾಡಿದ ರವೀಂದ್ರ ನಾಯ್ಕ, ಸೂರಜ್ ನಾಯ್ಕ ಸೋನಿ, ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ ಆಳ್ವಾ ಅವರು ಕೂಡ ಟಿಕೆಟ್‌ಗಾಗಿ ಯತ್ನ ನಡೆಸಿದ್ದಾರೆ. ಆದರೆ ಸಂಸದರು ಕ್ಷೇತ್ರವನ್ನು ನಿರ್ಲಕ್ಷಿಸಿದ್ದು ಅಲ್ಲದೆ ಈ ಬಾರಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ೫ ರಲ್ಲಿ ಕಾಂಗ್ರೆಸ್ ಶಾಸಕರುಗಳೇ ಇರುವುದರಿಂದ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯತ್ನ ನಡೆಸಿದೆ.



PGK

Post a Comment

Previous Post Next Post