ಪಶ್ಚಿಮಘಟ್ಟ ವಾಯ್ಸ್ ಕೆನಡಾದ ಒಂಟಾರಿಯೊ ಪ್ರಾಂತ್ಯದ ಬರ್ಲಿಂಗ್ಟನ್ ನಗರವು ಮಹತ್ವದ ಹೆಜ್ಜೆಯನ್ನು ಇಟ್ಟುಕೊಂಡಿದ್ದು, ಅಧಿಕೃತವಾಗಿ ಏಪ್ರಿಲ್‌ನ್ನು “ದಲಿತ ಇತಿಹಾಸದ ತಿಂಗಳು” ಎಂದು ಘೋಷಿಸಿದೆ ಮತ್ತು ಏಪ್ರಿಲ್ 14ರಂದು ಡಾ ಬಿಆರ್ ಅಂಬೇಡ್ಕರ್ ‘ಡೇ ಆಫ್ ಇಕ್ವಿಟಿ'(ಅಂಬೇಡ್ಕರ್ ಜಯಂತಿ) ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದೆ.
ಮಾರ್ಚ್ 20ರಂದು ಮೇಯರ್ ಮರಿಯಾನ್ನೆ ಮೀಡ್ ವಾರ್ಡ್ ದಲಿತ ಸಮುದಾಯಗಳಿಗೆ ಏಪ್ರಿಲ್‌ನ ಮಹತ್ವವನ್ನು ಪರಿಗಣಿಸಿ, ಪ್ರಮುಖ ಭಾರತದ ಸಂವಿಧಾನದ ಶಿಲ್ಪಿ ಮತ್ತು ಸಮಾಜ ಸುಧಾರಕರಾದ ಡಾ.ಭೀಮ್ ರಾವ್ ಅಂಬೇಡ್ಕರ್ ಜನ್ಮದಿನ ಮತ್ತು ಜ್ಯೋತಿರಾವ್ ಫುಲೆ ಅವರ ಮರಣದ ವಾರ್ಷಿಕೋತ್ಸವವನ್ನು ಪರಿಗಣಿಸಿ ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಜಾತಿ ಆಧಾರಿತ ವ್ಯವಸ್ಥಿತ ತಾರತಮ್ಯದ ವಿರುದ್ಧದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ಭೀಮ್ ರಾವ್ ಅಂಬೇಡ್ಕರ್ ಮತ್ತು ಜ್ಯೋತಿರಾವ್ ಫುಲೆ ಅವರ ಜನ್ಮ ಮತ್ತು ಮರಣ ವಾರ್ಷಿಕೋತ್ಸವಗಳನ್ನು ಒಳಗೊಂಡಿರುವ ಹಿನ್ನೆಲೆ ಏಪ್ರಿಲ್ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ. ಆದ್ದರಿಂದ ಏಪ್ರಿಲ್ 2024ನ್ನು “ದಲಿತ ಇತಿಹಾಸದ ತಿಂಗಳು” ಎಂದು ಘೋಷಿಸುತ್ತೇನೆ ಎಂದು ಬರ್ಲಿಂಗ್ಟನ್ ನಗರದ ಮೇಯರ್ ಮರಿಯಾನ್ನೆ ಮೀಡ್ ವಾರ್ಡ್ ಹೇಳಿದ್ದಾರೆ.
ನಾನು ಬರ್ಲಿಂಗ್ಟನ್ ನಗರದಲ್ಲಿ ಏಪ್ರಿಲ್ 2024ನ್ನು “ದಲಿತ ಇತಿಹಾಸ ತಿಂಗಳು” ಎಂದು ಘೋಷಿಸುತ್ತೇನೆ ಮತ್ತು ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಆಚರಿಸಲಾಗುವುದು ಎಂದು ಮೇಯರ್ ಹೊರಡಿಸಿರುವ ಮತ್ತೊಂದು ಆದೇಶದಲ್ಲಿ ತಿಳಿಸಲಾಗಿದೆ. ಕೆ ನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯವು 2022ರಲ್ಲಿ ಏಪ್ರಿಲ್‌ನ್ನು “ದಲಿತ ಇತಿಹಾಸದ ತಿಂಗಳು” ಎಂದು ಗೊತ್ತುಪಡಿಸಿದ ಉತ್ತರ ಅಮೆರಿಕಾದ ಮೊತ್ತ ಮೊದಲ ಪ್ರಾಂತ್ಯವಾಗಿದೆ. ಬ್ರಿಟಿಷ್ ಕೊಲಂಬಿಯಾದ ಬರ್ನಾಬಿ ಎಂಬ ನಗರವು ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿದೆ.