PGK NEWS(ಪಶ್ಚಿಮಘಟ್ಟ ವಾಯ್ಸ್)ಅಂಬೇಡ್ಕರ್ ವಾದದಿಂದಲೇ ಹಿಂದುತ್ವವಾದವನ್ನು ಮಣಿಸಬೇಕು: ಸಚಿವ ಸಂತೋಷ್ ಲಾಡ್!


ಪಶ್ಚಿಮಘಟ್ಟ ವಾಯ್ಸ್ 
ಬೆಂಗಳೂರು: ಹಿಂದುತ್ವಕ್ಕೆ ಅಂಬೇಡ್ಕರ್ ವಾದವೇ ಪರ್ಯಾಯ. ಅಂಬೇಡ್ಕರ್ ವಾದದಿಂದಲೇ ಹಿಂದುತ್ವವಾದವನ್ನು ಮಣಿಸಬೇಕು. ಹೀಗಾಗಿ ಬಸವಣ್ಣ, ಅಂಬೇಡ್ಕರ್ ವಾದವನ್ನು ಜನರ ಮಧ್ಯೆ ಹಂಚಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಲಹೆ ನೀಡಿದ್ದಾರೆ.

ಶನಿವಾರ ಇಲ್ಲಿನ ಗಾಂಧಿ ಭವನದಲ್ಲಿ ಲಡಾಯಿ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವೀನ್ ಸೂರಿಂಜೆ ರಚಿಸಿರುವ ‘ಮಹೇಂದ್ರ ಕುಮಾರ್- ನಡುಬಗ್ಗಿಸದ ಎದೆಯ ದನಿ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮಹೇಂದ್ರ ಕುಮಾರ್ ಕೋಮುಸೌಹಾರ್ದಕ್ಕಾಗಿ ಪರಿವರ್ತನೆಗೊಂಡು ʼಘರ್ ವಾಪ್ಸಿʼ ಮಾಡಿರುವವಂತಹವರು. ಈ ʼಘರ್ ವಾಪಸ್ಸಿಯಲ್ಲಿ ಬಹಳ ಮಜಾ ಇದೆ. ಯಾವ ಬಲ್ವೀರ್ ಸಿಂಗ್ ಬಾಬರಿ ಮಸೀದಿಯನ್ನು ಮೊದಲಿಗೆ ಧ್ವಂಸಗೊಳಿಸಿದನೋ, ಅವನು ಈಗ ಸುಮಾರು ನೂರು ಮಸೀದಿಗಳನ್ನು ಕಟ್ಟಿದ್ದಾನೆ. ರಾಮಜನ್ಮಭೂಮಿಗೆ ಈ ಬಲ್ವೀರ್ ಸಿಂಗ್ ಅವರನ್ನು ಮೋದಿ ಸರಕಾರ ಆಹ್ವಾನಿಸಿಲ್ಲ ಎಂದು ಅವರು ಟೀಕಿಸಿದರು.


ಇವತ್ತು ಬರೀ ಬಿಜೆಪಿ, ಆರೆಸ್ಸೆಸ್ ಅನ್ನು ಬೈಯುತ್ತಾ ಕೂರುವುದು ಒಂದು ಹಂತದವರಿಗೆ ಸರಿ. ಆದರೆ ನಮ್ಮಲ್ಲಿಯೂ ಒಂದು ನರೇಷನ್ ಬೇಕು ಆ ನರೇಷನ್‍ಗೆ ಒಬ್ಬ ಹೀರೋ ಬೇಕು. ನನ್ನ ಅಭಿಪ್ರಾಯದಲ್ಲಿ ಈ ನರೇಷನ್‍ಗೆ, ಹಿಂದುತ್ವವಾದಕ್ಕೆ ಪರ್ಯಾಯವಾಗಿ ಯಾವುದಾದರೂ ವಾದ ಇದ್ದರೆ ಅದು ಅಂಬೇಡ್ಕರ್ ವಾದ ಎಂದು ಅವರು ನುಡಿದರು.

ನಾವು ಕೋಮುವಾದದ ವಿರುದ್ಧ ಯುವಕರಿಗೆ ಬಹಳಷ್ಟು ಹೇಳುತ್ತೇವೆ. ಆದರೆ ಮತ್ತೊಂದು ಒಂದು ಕಡೆ ಅಂಬೇಡ್ಕರ್ ಅವರನ್ನು ಬಳಸಿಕೊಳ್ಳುವಲ್ಲಿ ನಾವು ಎಡವುತ್ತಿದ್ದೇವೆ ಅನಿಸುತ್ತದೆ. ಏಕೆಂದರೆ ಅಂಬೇಡ್ಕರ್ ಕೇವಲ ಎಸ್ಸಿ, ಎಸ್ಟಿಗೆ ಮಾತ್ರವಲ್ಲ, ಈ ದೇಶದ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಕಾನೂನನ್ನು ತರುವ ಕೆಲಸ ಮಾಡಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ ಆದರೆ ಹಿಂದೂ ಕೋಡ್ ಬಿಲ್ ವಿರೋಧಿಸುವವರು ಯಾರು ಎಂದು ಗುರುತಿಸಬೇಕಾಗಿದೆ ಎಮದು ಅವರು ತಿಳಿಸಿದರು.

ಇತ್ತೀಚೆಗೆ ಅಸ್ಸಾಮಿನ ಮುಖ್ಯಮಂತ್ರಿ ‘ಶೂದ್ರರು ಇನ್ನಾದರೂ ಕ್ಷತ್ರೀಯರ, ಬ್ರಾಹ್ಮಣರ, ವೈಶ್ಯರ ಕೆಲಸಗಳನ್ನು ಮಾಡಬೇಕು’ ಎಂದು ಹೇಳಿದ್ದಾರೆ. ಈ ತರಹದ ಮನಸ್ಥಿತಿ ಇಂದಿಗೂ ಜನರಲ್ಲಿದೆ. ಜಪಾನ್ ಇವತ್ತು ಸ್ಪೇಸ್ ಟೂರಿಸಂ ಬಗ್ಗೆ ಮಾತಾಡುತ್ತಿದೆ. ಚೀನಾ ವಿನೂತನವಾದ ಅಣೆಕಟ್ಟು ಕಟ್ಟಿದೆ. ಅವರು ವಿಜ್ಞಾನ-ತಂತ್ರಜ್ಞಾನಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಪ್ರಚಾರಕ್ಕಾಗಿ ಗುಡಿಗಳಿಗೆ ಎಷ್ಟು ಖರ್ಚು ಮಾಡ್ತಿದ್ದಾರೆ. ಆ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಅವರು ತಿಳಿಸಿದರು.



PGK

Post a Comment

Previous Post Next Post