PGK NEWS
: ರಾಮನಗರ:ಜಿಲ್ಲೆಯ ಮಾಗಡಿ ತಾಲೂಕಿನ ಸೀಗೇಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ, ನರೇಗಾದಡಿ ನಡೆದಿದೆ ಎನ್ನಲಾದ ಲಕ್ಷಾಂತರ ರೂ.ಮೊತ್ತದ ಅವ್ಯವಹಾರ ಕುರಿತು ಲೋಕಾಯುಕ್ತರು ತನಿಖೆ ಆರಂಭಿಸಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದಲ್ಲಿನ ತಂಡ ಬುಧವಾರ ವಿವಿಧ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿತು. ಈ ಕುರಿತು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಭ್ರಷ್ಟಾಚಾರ ನಿಗ್ರಹದಳದಲ್ಲಿ ದಾಖಲಿಸಿದ್ದ ದೂರನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ಮೊದಲಿಗೆ ಬೆಳಗಾವಿಗೆ ಭೇಟಿ ನೀಡಿದ ತಂಡ ಮೇಲ್ಛಾವಣಿ ಇಲ್ಲದೆ, ಅಪೂರ್ಣಗೊಂಡಿರುವ ಸಮುದಾಯ ಭವನವನ್ನು ವೀಕ್ಷಿಸಿತು. ಈ ಭವನ ನೋಡಲು ದನದ ಕೊಟ್ಟಿಗೆ ರೂಪದಲ್ಲಿ ಕಂಡುಬಂದಿತು. ಇದಕ್ಕೆ ಗ್ರಾಮ ವಿಕಾಸ ಹಾಗೂ ತಾಲ್ಲೂಕ್ ಪಂಚಾಯಿತಿ ಎರಡೂ ಕಡೆಯಲ್ಲಿ ಬಿಲ್ ಮಂಜೂರಾಗಿರುವ ಆರೋಪ ಕೇಳಿಬಂದಿದೆ.
ನಂತರ ಸೀಗೇಕುಪ್ಪೆ ಗ್ರಾಮಕ್ಕೆ ತೆರಳಿದ ತಂಡ ಅಲ್ಲಿ 2017-18ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ಚರಂಡಿ ಕಾಮಗಾರಿ ಮಾಡದಿದ್ದರೂ ಬಿಲ್ ಪಾವತಿಯಾಗಿರುವುದರ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೀಗೇಕುಪ್ಪೆ ಜನತಾ ಕಾಲೋನಿಯಲ್ಲಿ ಒಂದೇ ಕಡೆಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಹಾಗೂ ನರೇಗಾದಡಿ ಸಿಮೆಂಟ್ ಕಾಂಕ್ರಿಟ್ ರಸ್ತೆ ನಿರ್ಮಾಣದ ಹೆಸರಿನಲ್ಲಿ ಬಿಲ್ ಪಾವತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.