PGK NEWS (ಪಶ್ಚಿಮಘಟ್ಟ ವಾಯ್ಸ್ ಪುತ್ತೂರು ಎಪ್ರಿಲ್ 15: ಸೌಜನ್ಯ ಸಾವಿಗೆ ಈವರೆಗೆ ನ್ಯಾಯ ಸಿಕ್ಕಿಲ್ಲ ಈ ಹಿನ್ನಲೆ ಈಗಾಗಲೇ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದು, ಈ ಬಾರಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಮಾರು 1.50 ಲಕ್ಷದಿಂದ 2 ಲಕ್ಷಕ್ಕೂ ಮಿಕ್ಕಿ ನೋಟಾ ಮತ ಬೀಳುವ ಸಾಧ್ಯತೆಯಿದೆ ಎಂದು ಸೌಜನ್ಯ ಪರ ಹೋರಾಟ ಸಮಿತಿ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ನೋಟಾ ಹೆಸರಿನಲ್ಲಿ ಹಿಂದುತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧ್ಯಾರ್ಥಿನಿ ಸೌಜನ್ಯ ಸಾವಿಗೆ ನಮಗೆ ಈವರೆಗೆ ನ್ಯಾಯ ಸಿಕ್ಕಿಲ್ಲ ಈಗಾಗಲೇ ಈ ಕುರಿತು ರಾಜ್ಯದಾದ್ಯಂತ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದೇವೆ, ಈ ಹೋರಾಟದ ಮುಂದಿನ ಭಾಗವಾಗಿ ಈ ಬಾರಿ ನೋಟಾ ಅಭಿಯಾನವನ್ನು ಆರಂಭಿಸಿದ್ದೇವೆ ಎಂದರು.
ಈಗಾಗಲೇ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನೋಟಾ ಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನೋಟಾ ಮತವನ್ನು ಅತೀ ಹೆಚ್ಚು ಚಲಾಯಿಸುವ ಮೂಲಕ ನಮಗೆ ನ್ಯಾಯ ಪಡೆದುಕೊಳ್ಳುತ್ತೇವೆ. ಎಲ್ಲಿ ಹೆಚ್ಚು ನೋಟಾ ಮತ ಚಲಾವಣೆಯಾಗುತ್ತೋ ಆ ಕ್ಷೇತ್ರ ದೇಶದ ಗಮನ ಸೆಳೆಯುತ್ತೆ. ಸಮಸ್ಯೆಗೆ ಪರಿಹಾರವೂ ದೊರೆಯುತ್ತದೆ ಎನ್ನುವ ವಿಶ್ವಾಸವೂ ಎಂದರು. ಈ ಬಾರಿ ಸುಮಾರು 1.50 ಲಕ್ಷದಿಂದ 2 ಲಕ್ಷಕ್ಕೂ ಮಿಕ್ಕಿ ನೋಟಾ ಮತ ಬೀಳುವ ಸಾಧ್ಯತೆಯಿದೆ ಎಂದರು. ಅಲ್ಲದೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಹಿಂದೂ ಮುಖಂಡರನ್ನು ಮುಗಿಸುವ ಕೆಲಸ ನಡೆಯುತ್ತಿದೆ. ಬಿಜೆಪಿ ಹಿಂದೂಗಳ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಮಹೇಶ್ ತಿಮರೋಡಿ ಆರೋಪಿಸಿದ್ದಾರೆ.