ಪಶ್ಚಿಮಘಟ್ಟ ವಾಯ್ಸ್) ಕಲಬುರಗಿ/ಬೆಂಗಳೂರು : ಬಿಸಿಲು ನಾಡು ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಕಳೆದ ವಾರದಿಂದ ರಣ ಬಿಸಿಲು ಕೇಕೇ ಹಾಕುತ್ತಿದ್ದು, ಜನಜೀವನ ಮೇಲೆ ಪರಿಣಾಮ ಬೀರುತ್ತಿದೆ. ಶುಕ್ರವಾರ ಆಳಂದ ತಾಲೂಕಿನ ಮಾದನಹಿಪ್ಪರಗಾ ಹೊಬಳಿಯ ನಿಂಬಾಳ -ಹಡಲಗಿಯಲ್ಲಿ ದಾಖಲೆಯ 44. 5 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ.
ಕಳೆದ ವಾರದಿಂದ 44 ಡ್ರಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದು, ರಾಜ್ಯದಲ್ಲೇ ಇದು ಅತ್ಯಧಿಕ ತಾಪಮಾನ ಕಲಬುರಗಿಯದ್ದಾಗಿದೆ. ರಣ ರಣ ಬಿಸಿಲಿನಿಂದ ಜನ ಕಂಗೆಟ್ಟಿದ್ದು, ದಿನಚರಿಯೇ ಬದಲು ಮಾಡಿದೆ. ಮಧ್ಯಾಹ್ನ 12ರಿಂದ ಸಂಜೆ 6 ರವರೆಗೆ ಹೊರಗೆ ಬಾರದಂತೆ ಮಾಡಿದೆ.
ಜಿಲ್ಲೆಯ ಜೀವನದಿ ಭೀಮಾ ನದಿ ಸಂಪೂರ್ಣ ಬತ್ತಿರುವುದು ಉರಿ ಬಿಸಿಲಿಗೆ ತುಪ್ಪ ಸವರಿದಂತಾಗಿದೆ. ಬಿಸಿಲು ಹೀಗೆ ಮುಂದುವರೆದರೆ ಜನಜೀವನ ಅಸ್ತವ್ಯಸ್ತಗೊಳ್ಳುವ ಆತಂಕತೆ ಕಂಡು ಬರುತ್ತಿದೆ.ಪರಿಣಾಮಕಾರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳುವಂತೆ ಜಿಲ್ಲಾಡಳಿತ ಜನತೆಗೆ ಕರೆ ನೀಡಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಲೇ ಇದೆ. ಕಳೆದ ಮಾರ್ಚ್‌ನಲ್ಲಿ ಸರಾಸರಿ 34-35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪ ಮಾನ ದಾಖಲಾಗಿತ್ತು. ಇದರ ಪ್ರಮಾಣವು ಏಪ್ರಿಲ್ 2ರಂದು 37.2 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. 2024ರಲ್ಲಿ ಬೆಂಗಳೂರಿನಲ್ಲಿ ದಾಖಲಾದ ಅತ್ಯಧಿಕ ದಾಖಲೆ ಗರಿಷ್ಠ ಉಷ್ಣಾಂಶ ಇದಾಗಿದೆ. ಈ ವಾರದಲ್ಲಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
2016ರಲ್ಲಿ ಏಪ್ರಿಲ್ 25ರಂದು 39.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ದಾಖಲೆಯ ಉಷ್ಣಾಂಶ ದಾಖಲಾ ಗಿತ್ತು. ಇದು ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಇದುವರೆಗೆ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಆದರೆ, ಈ ಬಾರಿ ಅಂದರೆ 2024ರಲ್ಲಿ ಏಪ್ರಿಲ್ ಅಂತ್ಯಕ್ಕೆ 39.2 ಡಿಗ್ರಿಗೂ ಅಧಿಕ ತಾಪಮಾನ ದಾಖಲಾಗುವ ಲಕ್ಷಣ ಗೋಚರಿಸುತ್ತಿದೆ. ಈ ಮೂಲಕ ಬೆಂಗಳೂರು ಬೆಂದ ಕಾಳೂರಾಗಿ ಮಾರ್ಪಟ್ಟಿದೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 37.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾದರೆ, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 36.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿರುವುದು ಹುಬ್ಬೇರಿಸುವಂತೆ ಮಾಡಿದೆ.ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳ: ಈ ಅವಧಿಗೆ ಬೆಂಗಳೂರಿನಲ್ಲಿ ವಾಡಿಕೆಯಂತೆ 34.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗ ಬೇಕಿತ್ತು. ಆದರೆ, ವಾಡಿಕೆಗಿಂತ 3 ಡಿಗ್ರಿ ಉಷ್ಣಾಂಶ ಹೆಚ್ಚಾಗುತ್ತಿದೆ. ಎಲ್‌ನಿನೋ ಮಧ್ಯಮ ಹಂತದಲ್ಲಿ ಇದೆ. ಜೂನ್‌ನಲ್ಲಿ ಎಲ್‌ನಿನೋ ದುರ್ಬಲವಾಗುವ ಸಾಧ್ಯತೆಗಳಿವೆ. ನಂತರ
ಬೆಂಗಳೂರಿನಲ್ಲಿ ತಾಪಮಾನ ಕಡಿಮೆಯಾಗುವ ಸಂಭವ ಇದೆ. ಸದ್ಯ ಬೆಳಗ್ಗೆ ಭಾಗಶಃ ಮೋಡ ಕವಿದ ಆಕಾಶವಿರಲಿದೆ. ಮಧ್ಯಾಹ್ನ/ಸಂಜೆಯ ಹೊತ್ತಿಗೆ ಸ್ಪಷ್ಟವಾದ ಆಕಾಶವಾಗುತ್ತದೆ. ಇದರಿಂದ ಹೆಚ್ಚಿನ ತಾಪಮಾನದ ಅನುಭವ ಆಗಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ “ ಪಶ್ಚಿಮಘಟ್ಟ ವಾಯ್ಸ್’ಗೆ ತಿಳಿಸಿದ್ದಾರೆ.
ತಾಪಮಾನದ ಬೇಗೆಗೆ ಬೆಂಗಳೂರಿಗರು ತತ್ತರ: ಒಂದು ಕಾಲದಲ್ಲಿ ಏಪ್ರಿಲ್‌ನಲ್ಲೂ ತಂಪಾಗಿ ಇರುತ್ತಿದ್ದ ಐಟಿ-ಬಿಟಿ ಸಿಟಿಯಲ್ಲಿ ಇದೀಗ ತಾಪಮಾನದ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಿನ ಎಲ್ಲೆಡೆ ಹವಾನಿಯಂತ್ರಕ (ಏರ್ ಕಂಡೀಷನ್), ಕೂಲರ್, ಫ್ಯಾನ್‌ಗಳು ದಿನದ 24 ಗಂಟೆಯೂ ಚಲನೆಯಲ್ಲಿರುವುದು ಕಂಡು ಬರುತ್ತಿದೆ. ಬೆಂಗಳೂರಿನಲ್ಲಿ ಶುದ್ಧ ಕುಡಿಯುವ ನೀರಿನ ಬಾಟಲಿಗಳಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗುತ್ತಿದೆ. 2022, 2023ರ ಏಪ್ರಿಲ್‌ನಲ್ಲಿ ಮಾರಾಟವಾಗುತ್ತಿದ್ದ ನೀರಿನ ಬಾಟಲಿಗಳ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ ಎಂಬುದು ವ್ಯಾಪಾರಿಗಳ ಮಾತು.
(ಈ ರೀತಿ ಬಿಸಿಲು ಇರುವ ಕಾರಣ ಪ್ರಕೃತಿಯ ಶಾಪ)
ಬನ್ನಿರಿ ಪ್ರಕೃತಿಯನ್ನು ರಕ್ಷಿಸೋಣ!