ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ, ಮೂಲಸೌಲಭ್ಯ ಸೇರಿದಂತೆ ಯಾವ ಯಾವ ಕ್ಷೇತ್ರದಲ್ಲಿ ಹಿಂದುಳಿದಿದ್ದೆಯೋ ಆ ಕ್ಷೇತ್ರಗಳಿಗೆ ವಿಶೇಷ ಕಾಳಜಿ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಇಲಾಖೆಗಳು ಮಂಜೂರಾತಿ ನೀಡಬೇಕು. ಹಾಸ್ಟೆಲುಗಳು, ಅಂಗನವಾಡಿ ಹಾಗೂ ವಸತಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಲಭ್ಯ ಅನುದಾನವನ್ನು ಆದ್ಯತೆ ಮೇರೆಗೆ ವೆಚ್ಚ ಮಾಡಬೇಕು. ರಸ್ತೆ, ಕುಡಿಯುವ ನೀರು, ನೀರಾವರಿ ಮತ್ತಿತರ ಮೂಲಸೌಕರ್ಯ ಯೋಜನೆಗಳಿಗೆ ಆದ್ಯತೆ ಮೇರೆಗೆ ಅನುದಾನ ವಿನಿಯೋಗಿಸಬೇಕು. ಸಿಎಸ್ ಆರ್ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಬೋಧಕ ಸಿಬ್ಬಂದಿ ತೀವ್ರ ಕೊರತೆಯಿದ್ದು, ಶೀಘ್ರವೇ ಹುದ್ದೆ ಭರ್ತಿಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಸಚಿವರುಗಳು ಅಂಗನವಾಡಿ, ಹಾಸ್ಟೆಲು ಗಳು, ಶಾಲೆಗಳು, ಆಸ್ಪತ್ರೆಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಪರಿಶೀಲಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾರ್ಯದರ್ಶಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಹಾಗೂ ಆಯವ್ಯಯದಲ್ಲಿ ಈ ಸಾಲಿನಲ್ಲಿ 5,000 ಕೋಟಿ ರೂ. ಅನುದಾನ ಒದಗಿಸುವ ಭರವಸೆ ನೀಡಲಾಗಿದೆ. ಈ ಮೊತ್ತವನ್ನು ವೆಚ್ಚ ಮಾಡಲು ಅನುವಾಗುವಂತೆ ಜುಲೈ 15 ರೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಈಗ ಅನುೋದನೆಯಾದ ಟೆಂಡರ್ ಕರೆಯದೆ ಇರುವ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಕರೆಯಬೇಕು. ಒಟ್ಟು 14,228 ಕೋಟಿ ಅನುದಾನದಲ್ಲಿ ರೂ. 10,342 ಕೋಟಿ ವೆಚ್ಚವಾಗಿದೆ. ರೂ. 2,885 ಕೋಟಿ ಉಳಿದಿದೆ. ಬಾಕಿ ಉಳಿದ 3,528 ಕಾಮಗಾರಿಗಳ ಕುರಿತು ನಿಯಮಿತವಾಗಿ ಪ್ರಗತಿ ಪರಿಶೀಲನೆ ನಡೆಸಿ, ಅನುಷ್ಠಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಿ, ಜುಲೈ ಅಂತ್ಯದೊಳಗೆ ಪ್ರಾರಂಭಿಸಬೇಕು ಎಂದರು.
ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೃಜನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.