ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2024 ರ ಜನವರಿಯಿಂದ ಮೇ ವರೆಗೆ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ 18 ಫೋಕ್ಸೋ ಪ್ರಕರಣಗಳು ದಾಖಲಾಗಿರುವ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಹೆಚ್ಚಿನ ಫೋಕ್ಸೋ ಪ್ರಕರಣಗಳಲ್ಲಿ ಮಕ್ಕಳಿಗೆ ಪರಿಚಯದ ಮತ್ತು ಅತ್ಯಂತ ಸಮೀಪದ ವ್ಯಕ್ತಿಗಳಿಂದಲೇ ದೌರ್ಜನ್ಯ ನಡೆದಿರುವುದು ಕಂಡು ಬರುತ್ತದೆ. ಅಲ್ಲದೇ ಬಾಲ್ಯ ವಿವಾಹ ಮತ್ತು ಪ್ರೇಮ ಪ್ರಕರಣಗಳಿಂದಲೂ ದೌರ್ಜನ್ಯಗಳು ನಡೆದಿರುವ ಸಾಧ್ಯತೆಗಳಿವೆ. ಆದ್ದರಿಂದ ಜಿಲ್ಲೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಸೂಕ್ತ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಿ ಬಾಲ್ಯ ವಿವಾಹಗಳನ್ನು ನಡೆಸುವ ಸಾಧ್ಯತೆಗಳಿದ್ದು, ಜಿಲ್ಲೆಯಲ್ಲಿ 8,9 ಮತ್ತು 10 ನೇ ತರಗತಿಗಳ ವಿದ್ಯಾರ್ಥಿನಿಯರು ಸೂಕ್ತ ಕಾರಣಗಳಿಲ್ಲದೇ ಶಾಲೆಗೆ ಗೈರು ಹಾಜರಾದಲ್ಲಿ ಮತ್ತು ಶಿಕ್ಷಣವನ್ನು ತೊರೆದಲ್ಲಿ ಅಂತಹ ಮಕ್ಕಳ ಮೇಲೆ ನಿಗಾ ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣಪತ್ರವನ್ನು ಕೈ ನಲ್ಲಿ ನೀಡುವ ಕುರಿತಂತೆ ಪ್ರತ್ಯೇಕ ನಿಯಮ ರೂಪಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ , ಸೂಚನಾ ಫಲಗಳನ್ನು ಅಳವಡಿಸಿರುವ ಬಗ್ಗೆ ಪರಿಶೀಲಿಸಿ, ಸೂಕ್ತ ರಿಜಿಸ್ಟರ್ ಮತ್ತು ದಾಖಲಾತಿಗಳನ್ನು ಇಟ್ಟಿರುವ ಬಗ್ಗೆ ಪರಿಶೀಲಿಸಬೇಕು. ಸಾರ್ವಜನಿಕರು ಯಾವುದೇ ಸ್ಕಾö್ಯನಿಂಗ್ ಸೆಂಟರ್ ನಲ್ಲಿ ಭ್ರೂಣಲಿಂಗ ಪತ್ತೆ ಮಾಡುವುದು ಮತ್ತು ಪತ್ತೆಗೆ ಸಹಕರಿಸುವುದರ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸುವಂತೆ ತಿಳಿಸಿದ ಅವರು ಖಚಿತ ಮಾಹಿತಿ ನೀಡುವ ಸಾರ್ವಜನಿಕರಿಗೆ ನಗದು ಬಹುಮಾನ ನೀಡುವುದರ ಜೊತೆಗೆ ಅವರ ಹೆಸರನ್ನು ಗೋಪ್ಯವಾಗಿಡಲಾಗುವುದು ಎಂದರು.
ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತಂತೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಹೆಚ್ಚಿನ ನಿಗಾ ಇಡಬೇಕು. ಕಾಣೆಯಾಗುವ ಮಹಿಳೆಯರು ಮತ್ತು ಮಕ್ಕಳ ಕುರಿತಂತೆ ನಿಯಮಿತವಾಗಿ ತಮಗೆ ವರದಿ ನೀಡುವಂತೆ ಹಾಗೂ ನಾಪತ್ತೆ ಪ್ರಕರಣಗಳನ್ನು ಆದಷ್ಟು ಶೀಘ್ರದಲ್ಲಿ ಪತ್ತೆ ಹಚ್ಚುವುದರ ಮೂಲಕ ಅಕ್ರಮ ಸಾಗಾಣಿಕೆಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸಬೇಕು , ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ , ತಾಲೂಕುಗಳಲ್ಲಿ ಕಾವಲು ಸಮಿತಿಗಳ ಸಭೆಯನ್ನು ನಿರಂತರವಾಗಿ ನಡೆಸಬೇಕು ಎಂದರು.
ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ, ಡಿ.ವೈ.ಎಸ್ಪಿ ಗಿರೀಶ್, ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕಿ ಹೆಚ್.ಹೆಚ್. ಕುಕನೂರು, ಡಿಡಿಪಿಐ ಲತಾ ನಾಯಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.