PGK NEWS :-ಜೈಲಿನಲ್ಲಿ ಮೊದಲ ದಿನ ಕಳೆದ ದರ್ಶನ್​.. ಜೈಲುಹಕ್ಕಿಯಾಗಿರೋ ದರ್ಶನ್​​ ವಿಲವಿಲ ಒದ್ದಾಡುವಂತಾಗಿದೆ.


PGK NEWS
 -ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್​​ ಸೇರಿ ಇಡೀ ಗ್ಯಾಂಗ್​​​ ಕೊನೆಗೂ ಜೈಲುಪಾಲಾಗಿದೆ. ಮೂರು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ಬಳಿಕ ನಿನ್ನೆ ಕೋರ್ಟ್​ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. 2011ರ ನಂತರ 2ನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್​ ಮೌನಕ್ಕೆ ಶರಣಾಗಿದ್ದಾರೆ. ಜೈಲುಹಕ್ಕಿಯಾಗಿರೋ ದರ್ಶನ್​​ ವಿಲವಿಲ ಒದ್ದಾಡುವಂತಾಗಿದೆ.

ಇದು ಸಂಕಷ್ಟ ಕಾಲ. ಒಂದು ಕ್ಷಣದ ಕೋಪ. ಸಿಡುಕಿನ ಸ್ವಭಾವ ಕತ್ತಲೆಕೋಣೆಗೆ ತಳ್ಳಿದೆ. ಕೈಕಟ್ಟಿ ಕೂರುವ ಪರಿಸ್ಥಿತಿ ತಂದಿದೆ. ಕಾನೂನಿನ ಎಲ್ಲೆ ಮೀರಿ ರೇಣುಕಾಸ್ವಾಮಿಯ ಜೀವ ತೆಗೆದ ಗ್ಯಾಂಗ್ ಇಂದು ಜೈಲು ಸೇರಿದೆ. 4 ಗೋಡೆಗಳ ಮಧ್ಯೆ ಕಂಬಿ ಎಣಿಸುವಂತಾಗಿದೆ.

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಕೇಸ್​ನಲ್ಲಿ ನಟ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದಂತಾಗಿದೆ. ಎ1 ಪವಿತ್ರಾಗೌಡ ಸೇರಿ 13 ಆರೋಪಿಗಳನ್ನು ಒಂದು ಬ್ಯಾಚ್​​ನಲ್ಲಿ ಜೈಲಿಗೆ ಕಳುಹಿಸಿದ್ದ 24ನೇ ಎಸಿಎಂಎಂ ಕೋರ್ಟ್​ ನಿನ್ನೆ 2ನೇ ಬ್ಯಾಚ್​​ನಲ್ಲಿ ಎ2 ದರ್ಶನ್ ಸೇರಿ ಧನರಾಜ ವಿನಯ್, ಪ್ರದೂಶ್​​ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ 13 ದಿನಗಳ ಕಸ್ಟಡಿಯಲ್ಲಿ ಸಂಪೂರ್ಣ ವಿಚಾರಣೆ ಬಳಿಕ ಡಿ ಗ್ಯಾಂಗ್​​ಗೆ ಪರಪ್ಪನ ಅಗ್ರಹಾರ ಜೈಲಿನ ದರ್ಶನ ಆಗಿದೆ.

ಜೈಲಿನಲ್ಲಿ ಮೌನದ ಮಡಿಲು ಸೇರಿದ ಡಿ ಬಾಸ್

ಹತ್ಯೆ ಕೇಸ್​​ನಲ್ಲಿ ಲಾಕ್ ಆಗಿರೋದು ನಟ ದರ್ಶನ್​​ಗೆ ಬರಸಿಡಿಲು ಬಡಿದಂತಾಗಿದೆ. ಕೋರ್ಟ್​ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೇ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳು ನ್ಯಾಯಾಲಯದ ಮುಂದೆ ಜಮಾಯಿಸಿ ದರ್ಶನ್ ಪರ ಘೋಷಣೆಗಳನ್ನು ಕೂಗಿದರು. ಪೊಲೀಸ್ ವ್ಯಾನ್‌ನಿಂದಲೇ ಅಭಿಮಾನಿಗಳತ್ತ ಕೈ ಬೀಸಿ ತೆರಳಿದ ದರ್ಶನ್ ಮುಖದಲ್ಲಿ ಮೇಲ್ನೋಟಕ್ಕೆ ನಗು ಕಾಣ್ತಿತ್ತು. ಆದ್ರೆ ಒಳಗೊಳಗೆ ಜೈಲುಯಾತ್ರೆ ಹತಾಶೆಯಲ್ಲಿ ಮುಳುಗಿಸಿತ್ತು. ಭದ್ರತೆಯ ದೃಷ್ಟಿಯಿಂದ ನಟ ದರ್ಶನ್​ನನ್ನ ಪರಪ್ಪನ ಅಗ್ರಹಾರ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದು ಕೈದಿ ಸಂಖ್ಯೆ 6106 ಅನ್ನು ನೀಡಲಾಗಿದೆ. ಜೈಲಿಗೆ ತೆರಳ್ತಿದ್ದಂತೆ ನಟ ದರ್ಶನ್ ಮೌನಕ್ಕೆ ಶರಣಾಗಿದ್ದು ಜೈಲೂಟ ಒಲ್ಲದ ಗಂಡಂಗೆ ಮೊಸರಲ್ಲಿ ಕಲ್ಲು ಎಂಬಂತಾಗಿದೆ.

ರಾತ್ರಿ ಊಟಕ್ಕೆ ಚಪಾತಿ, ಅನ್ನ, ಮಜ್ಜಿಗೆ ನೀಡಿರುವ ಸಿಬ್ಬಂದಿ

ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ನಟ ದರ್ಶನ್​​​ಗೆ ನಿನ್ನೆ ರಾತ್ರಿ ಊಟಕ್ಕೆ ಚಪಾತಿ, ಅನ್ನ, ಮಜ್ಜಿಗೆ ನೀಡಿದ್ದಾರೆ. ಚಪಾತಿ ಮಾತ್ರ ತಿಂದು ಮಜ್ಜಿಗೆ ಕುಡಿದಿರುವ ನಟ ದರ್ಶನ್ ಜೈಲು ಸಿಬ್ಬಂದಿ ಕೊಟ್ಟ ಅನ್ನ ತಿನ್ನಲು ಒಲ್ಲೆ ಎಂದಿದ್ದಾರಂತೆ. ರಾತ್ರಿ 8 ಗಂಟೆ ಸುಮಾರಿಗೆ ಜೈಲೂಟ ಸೇವಿಸಿದ ದರ್ಶನ್ ಯಾರ ಜೊತೆಗೂ ಮಾತನಾಡದೇ ಮೌನಕ್ಕೆ ಜಾರಿದ್ದಾರೆ. ಸಪ್ಪೆ ಮೊರೆ ಹಾಕಿಕೊಂಡು ನಟ ದರ್ಶನ್ ಜೈಲಲ್ಲಿ ಕುಳಿತಿದ್ದಾರೆ

ಇನ್ನು ಕೊಲೆ ಆರೋಪಿಗಳು ಈಗಾಗಲೇ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲರನ್ನೂ ಒಂದೇ ಜೈಲಿನಲ್ಲಿ ಇರಿಸಿದ್ರೆ ಸಂಚು ರೂಪಿಸುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಗಳನ್ನು ಪ್ರತ್ಯೇಕವಾಗಿ ರಾಜ್ಯದ ವಿವಿಧ ಜೈಲುಗಳಲ್ಲಿ ಇರಿಸಲು ನಿರ್ದೇಶಿಸುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮನವಿ ಮಾಡಿದರು.

 ಎಸ್​ಪಿಪಿ ಮನವಿಗೆ ಅಸ್ತು ಎಂದ ನ್ಯಾಯಾಧೀಶರು ನಾಡಿದ್ದು ಸೋಮವಾರ ಮತ್ತೆ ವಿಚಾರಣೆ ಮಾಡಲಿದ್ದಾರೆ. ಅಂದು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ನಿರ್ಧರಿಸುವ ಬಗ್ಗೆ ತಿಳಿಸಿದ್ದಾರೆ. ತುಮಕೂರು, ಅಥವಾ ರಾಮನಗರ ಜೈಲಿಗೆ ದರ್ಶನ್‌, ಸಹ ಆರೋಪಿಗಳನ್ನ ಶಿಫ್ಟ್‌ ಮಾಡುವ ಸಾಧ್ಯತೆ ಇದೆ.

ಒಟ್ಟಾರೆ, ಮಾಡಿದ್ದುಣ್ಣೋ ಮಾರಾಯ ಎಂಬಂತೆ ನಟ ದರ್ಶನ್​ಗೆ ಜೈಲೂಟ ಸವಿಯುವಂತಹ ಪರಿಸ್ಥಿತಿ ಬಂದಿದ್ದು ದೊಡ್ಡ ಕಳಂಕವೇ ಸರಿ.



PGK

Post a Comment

Previous Post Next Post