PGK NEWS ಪಶ್ಚಿಮಘಟ್ಟ ವಾಯ್ಸ್ ದಾಂಡೇಲಿ : ಒಂದು ಕಾಲದಲ್ಲಿ ದಾಂಡೇಲಿ ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಸ್ಥಳ ಆಗಿನ ದಾಂಡೇಲಿಯಾಗಿದ್ದ ಈಗಿನ ಹಳೆದಾಂಡೇಲಿ. ಹೊಸ ದಾಂಡೇಲಿ ಆದ ನಂತರ ಹಳೆ ದಾಂಡೇಲಿ ತನ್ನ ವೈಭವವನ್ನು ಕಳಚಲಾರಂಭಿಸಿತು. ಆ ಕಾರಣಕ್ಕಾಗಿ ಇಂದು ಹಳೆದಾಂಡೇಲಿ ಯವ್ವನವನ್ನು ಕಳೆದುಕೊಂಡ ಹಣ್ಣು ಹಣ್ಣು ಮುದುಕನಂತಿರುವ ಪ್ರದೇಶವಾಗಿದೆ. ವಯಸ್ಸು 90 ಆದ ನಂತರ ಶಸ್ತ್ರಚಿಕಿತ್ಸೆ ಯಾಕೆ ಬೇಕು, ದಿನ ಕಳೆದರೆ ಸಾಕು, ಹೇಗೂ ಇಂದಲ್ಲ ನಾಳೆಯಾದರೂ ಸಾಯ್ತಾನೆ ಬಿಡಿ ಎನ್ನುವಂತಹ ಜಾಯಮಾನದಲ್ಲಿ ನಮ್ಮ ಸರಕಾರಗಳು ಇದೆಯೆ ಏನೋ ಎಂಬಂತೆ ಬಾಸವಾಗತೊಡಗಿದೆ.
ನಮ್ಮೆಲ್ಲ ಸ್ವಾರ್ಥಕ್ಕಾಗಿ, ಊರು ಪರ ಊರಿನ ಲಾಭಕ್ಕಾಗಿ ಹಳೆದಾಂಡೇಲಿ ಬೇಕು. ಆದರೆ ಹಳೆದಾಂಡೇಲಿಗೆ ಮಾತ್ರ ಏನನ್ನು ನೀಡಲಾರೆವು ಎಂಬಂತಿದೆ ಸರಕಾರಗಳ ನಡೆ. ಈ ಸರಕಾರಗಳ ನಡೆಗೆ ಹಳೆದಾಂಡೇಲಿಯ ಜನ ಇನ್ನೂ ನುಡಿ ಬಿಚ್ಚದೇ ಇರುವುದು ಇದಕ್ಕೆ ಕಾರಣವಾಗಿರಬಹುದೇ, ಅಥವಾ ನಂಗ್ಯಾಕೆ ಬೇಕು ಉಳಿದವರು ಮಾಡ್ಲಿ ಎಂಬ ಇಲ್ಲಿಯ ಜನರಲ್ಲಿರುವ ಧೋರಣೆಯೆ, ಅಥವಾ ಏನು ಬೇಕಾದ್ರೂ ಆಗ್ಲಿ ನನಗೇನು ಹೋಗೋದೈತಿ ಎಂಬ ನಿಲುವಿಗೆ ಇಲ್ಲಿಯ ಜನತೆ ಬಂದಿದ್ದಾರೆಯೆ ಎಂಬ ಅನುಮಾನ ಹಳೆದಾಂಡೇಲಿಯ ರಸ್ತೆಯನ್ನು ನೋಡಿದಾಗ ಅನಿಸುವುದರಲ್ಲಿ ಯಾವ ಅನುಮಾನವು ಇಲ್ಲ.
ಹಳೆದಾಂಡೇಲಿಯ ಜನತೆ ಎಲ್ಲರೂ ಸೇರಿ, ರಸ್ತೆ ದುರಸ್ತಿ ಆಗದೆ ಇದ್ದ ಪಕ್ಷದಲ್ಲಿ ನಾವು ಮತದಾನವೇ ಮಾಡುವುದಿಲ್ಲ ಎಂಬ ಒಕ್ಕೊರಳ ಆಗ್ರಹ ಮಾಡುತ್ತಿದ್ದಲ್ಲಿ ಇಂದು ಈ ಪರಿಸ್ಥಿತಿ ಹಳೆದಾಂಡೇಲಿಯ ರಸ್ತೆಗೆ ಬರುತ್ತಿರಲಿಲ್ಲ. ನಮಗ್ಯಾಕೆ ಊರ ಉಸಾಬರಿ ಎಂಬ ಹಳೆದಾಂಡೇಲಿಯ ಜನತೆಯ ನಿಲುವೇ ರಸ್ತೆಯ ಈ ಪರಿಸ್ಥಿತಿಗೆ ಕಾರಣವೇ, ಗೊತ್ತಿಲ್ಲ.
ಒಂದಂತೂ ನಿಜ ಹಳೆದಾಂಡೇಲಿಯ ಜನತೆಯ ಮುಗ್ಧತೆಯ ದುರ್ಬಳಕೆ ಖಂಡಿತವಾಗಿಯೂ ಆಗುತ್ತಿದೆ ಎನ್ನುವುದನ್ನು ಈ ರಸ್ತೆಯೆ ಸಾರಿ ಹೇಳುತ್ತಿದೆ. ಇದ್ದ ಪೈಪುಗಳನ್ನು ಹಾಕಿಸಿಕೊಳ್ಳಲು ರಸ್ತೆಯನ್ನು ಅಗೆದು ಪೈಪ್ ಅಳವಡಿಸಿ ರಸ್ತೆಯನ್ನು ಹಾಳು ಮಾಡಿದ್ದನ್ನು ಹಳೆದಾಂಡೇಲಿಯ ಜನ ಕಣ್ಣರಳಿಸಿ ನೋಡಿಯಾಗಿದೆ. ಆದ್ರೆ ಅದೇ ಅಗೆದು ಮುಚ್ಚಿದ ರಸ್ತೆಯನ್ನು ಸರಿಪಡಿಸಲು ಇದೇ ಹಳೆದಾಂಡೇಲಿಯ ಜನ ಹೋರಾಟ ಮಾಡಬೇಕಾಯಿತು. ಮೊನ್ನೆ ಮೊನ್ನೆ ರಸ್ತೆಗೆ ಡಾಂಬರೀಕರಣವು ಆಗಿತ್ತು. ಆ ಡಾಂಬರೀಕರಣ ಹಾಕಿ ಇದೀಗ ಒಂದೆರಡು ತಿಂಗಳೊಳಗೆ ಡಾಂಬರು ಕಿತ್ತು ಹೋಗಿದೆ. ಡಾಂಬರ್ ಹಾಕಿದ್ದನ್ನು ನೋಡುವಾಗ, ಮೇಕಪ್ ಮಾಡಿ ಬಿಸಿಲಲ್ಲಿ ಅಡ್ಡಾಡಿದ ತತ್ ಕ್ಷಣವೆ ಮೇಕಪ್ ಮಂಗಮಾಯ ಆಗುವ ರೀತಿಯಲ್ಲಿ ಈ ರಸ್ತೆಗೆ ಹಾಕಿದ ಡಾಂಬರ್ ಮಂಗ ಮಾಯವಾಗಿದೆ.