ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್ ಶಿಕಾರಿಪುರ: ತಾಲ್ಲೂಕಿನ ರೈತರ ಜೀವನಾಡಿಯಾಗಿ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಅಂಜನಾಪುರ ಜಲಾಶಯ ಮಂಗಳವಾರ ಸಂಪೂರ್ಣ ಭರ್ತಿಯಾಗಿದ್ದು,ಕೋಡಿ ಮೇಲೆ ನೀರು ಹರಿಯುತ್ತಿದೆ.
ಅಂಜನಾಪುರ ಜಲಾಶಯ ಸುಮಾರು 23 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಜಲಾಶಯದಿಂದ ಶಿಕಾರಿಪುರ ಪಟ್ಟಣ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲಾಗುತ್ತದೆ. ತಾಲ್ಲೂಕಿನಲ್ಲಿ ಭತ್ತ ಬೆಳೆಯುವ ರೈತರು ಈ ಜಲಾಶಯ ನೀರನ್ನು ನಂಬಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಜಲಾಶಯಕ್ಕೆ ನೀರು ಹರಿದು ಬಂದಿದ್ದು, ಪ್ರಸ್ತುತ ಜಲಾಶಯ ಸಂಪೂರ್ಣ ಭರ್ತಿಯಾಗಿ ಕೋಡಿ ಮೇಲೆ ನೀರು ಹರಿಯುತ್ತಿರುವುದರಿಂದ ಅಂಜನಾಪುರ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಭತ್ತ ನಾಟಿ ಕಾರ್ಯ ನಡೆಸಲು ರೈತರು ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಅಂಜನಾಪುರ ಜಲಾಶಯ ಸಂಪೂರ್ಣ ಭರ್ತಿಯಾಗುತ್ತಿದ್ದಂತೆ ಸ್ವಯಂ ಚಾಲಿತ ಗೇಟುಗಳು ತೆರೆದುಕೊಂಡು ಜಲಾಶಯ ನೀರು ಹೊರ ಬೀಳುತ್ತಿದ್ದು, ಈ ದೃಶ್ಯ ನೋಡುಗರ ಗಮನ ಸೆಳೆಯುತ್ತಿದೆ. ತಾಲ್ಲೂಕಿನ ಜನತೆ ಅಂಜನಾಪುರ ಜಲಾಶಯ ಭೇಟಿ ನೀಡಿ ಜಲಾಶಯದಿಂದ ನೀರು ಬಿಡುಗಡೆಯಾಗುತ್ತಿರುವ ದೃಶ್ಯವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ.
ಬುಧವಾರ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.