ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್:-ಬೆಂಗಳೂರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕರ್ನಾಟಕ ಬಿಟ್ಟು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯಬಿದ್ದರೆ ಖಂಡಿತವಾಗಿಯೂ ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಡಾ. ಬಾಬು ಜಗಜೀವನ ರಾಮ್ ಸಂಶೋಧನಾ ಸಂಸ್ಥೆ ವತಿಯಿಂದ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಭವನದ ಉದ್ಘಾಟಿಸಿ ಮಾತನಾಡಿದರು.
ನಮಗೆ ಸಂಪ್ರದಾಯವಾದಿ ಧೋರಣೆಗಳಿಲ್ಲ
ಬ್ಯಾಂಕ್ ಗಳಲ್ಲಿ, ಕೆ.ಎಸ್. ಎಫ್ .ಸಿ, ಉದ್ಯಮಿಗಳಿಗೆ 10 ಕೋಟಿವರೆಗೆ 4% ಬಡ್ಡಿಗೆ ಸಾಲ ದೊರೆಯಬೇಕೆಂಬ ಸೌಲಭ್ಯ ಒದಗಿಸಿದ್ದು ನಮ್ಮ ಸರ್ಕಾರ. ಎಸ್.ಸಿ.ಎಸ್ ಪಿ /ಟಿ. ಎಸ್.ಪಿ ಕಾಯ್ದೆಯಡಿ .7(ಡಿ) ಕೈಬಿಡಲು ಸಲಹೆ ಬಂದ ಮೇರೆಗೆ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಕೈಬಿಡಲಾಗಿದೆ. ಬದಲಾವಣೆಗಳು ಅಗತ್ಯವಿದ್ದರೆ ಮಾಡುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿಗಳು ನಮಗೆ ಯಾವುದೇ ಸಂಪ್ರದಾಯವಾದಿ ಧೋರಣೆಗಳಿಲ್ಲ ಎಂದರು. ಪರಿಶಿಷ್ಟರ, ಸಾಮಾಜಿಕ ನ್ಯಾಯದ ವಿರುದ್ಧವಾದ ನಿಲುವು ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾರಂಭ
ದಲಿತ ಸಂಘಟನೆಗಳು 70 ರ ದಶಕದಲ್ಲಿ ಸಾರಾಯಿ ಅಂಗಡಿಗಳು ಬೇಡ, ವಸತಿ ಶಾಲೆಗಳು ಬೇಕು ಎಂದು ಬೇಡಿಕೆ ಸಲ್ಲಿಸಿದ್ದರಿಂದ ವಸತಿ ಶಾಲೆಗಳನ್ನು ಪ್ರಾರಂಭ ಮಾಡಲಾಗಿದೆ.94-95 ರಲ್ಲಿ ಹಣಕಾಸು ಸಚಿವರಾಗಿದ್ದಾಗ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದ್ದು ತಾವೇ ಎಂದು ಸ್ಮರಿಸಿದರು.
ಹೋಬಳಿಗೊಂದು ವಸತಿ ಶಾಲೆ
ಇಂದು 821 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಹೋಬಳಿಗೊಂದು ವಸತಿ ಶಾಲೆ ತೆರೆಯುವ ನಿರ್ಧಾರ ಸರ್ಕಾರ ಮಾಡಿದೆ. 2024-25 ರಲ್ಲಿ 20 ವಸತಿ ಶಾಲೆಗಳನ್ನು ತೆರೆಯಲಾಗುವುದು. ಒಟ್ಟು 905 ವಸತಿ ಶಾಲೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸಲಿವೆ. ವಸತಿ ಶಾಲೆಗಳಲ್ಲಿ 211000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ದಲಿತರಿಗೆ ಸಾಮಾಜಿಕ ಆರ್ಥಿಕ ಶಕ್ತಿ ಬರಬೇಕು
ಕ್ರೈಸ್ ವಸತಿ ನಿಲಯದ ವಿದ್ಯಾರ್ಥಿ 625 ಕ್ಕೇ 625 ಅಂಕಗಳನ್ನು ಗಳಿಸಿದ್ದನ್ನು ಸಿಎಂ ಸ್ಮರಿಸಿದರು. ದಲಿತರಿಗೆ ಸಾಮಾಜಿಕ ಆರ್ಥಿಕ ಶಕ್ತಿ ಬರಬೇಕು. ಆಗ ಮಾತ್ರ ಅವರು ಮುಂಚೂಣಿಗೆ ಬರಲು ಸಾಧ್ಯವಾಗುತ್ತದೆ. ಬಸವಣ್ಣ, ಬಾಬು ಜಗಜೀವನ್ ರಾಂ ಅವರು ಕಂಡಿದ್ದ ಕನಸು ನನಸಾಗಲು ಆರ್ಥಿಕ ಸಾಮಾಜಿಕ ಶಕ್ತಿ ಬರಬೇಕು ಎಲ್ಲರೂ ವಿದ್ಯಾವಂತರಾಗಬೇಕು. ಶಿಕ್ಷಣ, ಸಂಘಟನೆ ಹೋರಾಟಕ್ಕೆ ಕರೆ ಕೊಟ್ಟಿದ್ದ ಅಂಬೇಡ್ಕರ್, ಜಗಜೀವನ್ ರಾಂ ಅವರು ಜಾತಿ ವಿನಾಶವಾಗಬೇಕು. ಜಾತಿ ವಿನಾಶವಾಗದಿದ್ದರೆ ಸಮಾನತೆ ಬರುವುದಿಲ್ಲ ಎಂದಿದ್ದರು. ಹಂತ ಹಂತವಾಗಿ ಇದನ್ನು ನಾವು ಮಾಡಬೇಕು. ಮಾಡದೆ ಇರುವವರನ್ನು ಪ್ರಶ್ನಿಸುವ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಸಮ ಸಮಾಜ ನಿರ್ಮಾಣ ಮಾಡಬೇಕು
ಸಂವಿಧಾನದ ವಿರುದ್ಧವಾಗಿರುವರನ್ನು ಪ್ರಶ್ನಿಸಬೇಕು. ಎಲ್ಲಾ ವ್ಯವಸ್ಥೆಗಳಲ್ಲಿ ಎಲ್ಲಾ ಜನಾಂಗದವರು ಬರಬೇಕು. ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವ ಕೆಲಸ ನಾವು ಮಾಡುತ್ತೇವೆ. ಬಾಬು ಜಗಜೀವನ್ ರಾಂ ಸಂಶೋಧನಾ ಸಂಸ್ಥೆ ವತಿಯಿಂದ ಬೇರೆ ಬೇರೆ ಕೆಲಸಗಳು ಕೂಡ ಆಗಬೇಕು. ಪರಿಶಿಷ್ಟ ಜಾತಿಗೆ ಸೇರಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಬೇಕು. ವಸತಿ ಸೌಲಭ್ಯವನ್ನೂ ಕಲ್ಪಿಸಿದರೆ ಅನುಕೂಲವಾಗುತ್ತದೆ. ಬಾಬು ಜಗಜೀವನ್ ರಾಮ್ ಅವರ ದೂರದೃಷ್ಟಿಯಂತೆ ಸಂಸ್ಥೆಯ ಸದುಪಯೋಗವಾಗಬೇಕು. ಸಮ ಸಮಾಜ ನಿರ್ಮಾಣ ಮಾಡುವತ್ತ ನಾವು ಹೆಜ್ಜೆ ಇಡಬೇಕು ಎಂದರು.
ಪರಿಹಾರ ಕಂಡುಕೊಳ್ಳಲು ಪ್ರಯತ್ನ
ಸಂವಿಧಾನವನ್ನು ಅರಿಯಲು ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸಲಾಗುತ್ತಿದೆ. ಇತಿಹಾಸವನ್ನು ಎಲ್ಲರೂ ಅರಿತು ಪರಿಹಾರಗಳನ್ನು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು.
ಒಳಮೀಸಲಾತಿ ಬಗ್ಗೆ ಕೇಂದ್ರಕೆ ಶಿಫಾರಸ್ಸು
ನಮ್ಮ ಸರ್ಕಾರ ಒಳಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡಲಾಗುವುದು ಎಂದರು. ಈ ಭವ್ಯ ಭವನ ಎಲ್ಲರಿಗೂ ಸದುಪಯೋಗವಾಗಲಿ. ಅದಕ್ಕೆ ಅಗತ್ಯವಿರುವ ನೆರವನ್ನು ಸರ್ಕಾರ ನೀಡಲಿದೆ ಎಂದರು.