ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್ :-ಶಿವಮೊಗ್ಗ, ಜುಲೈ : ಮಲೆನಾಡಿನ ಭಾಗದಲ್ಲಿ ಧಾರಾಕಾರ ಮಳೆ (Rain) ಸುರಿಯುತ್ತಿದೆ. ಹೀಗಾಗಿ ಅಪಾಯದ ಮಟ್ಟ ಮೀರಿ ನದಿ, ಹಳ್ಳಗಳು ಹರಿಯುತ್ತಿವೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಅಣೆಕಟ್ಟು, ಜಲಪಾತಗಳು, ನದಿ ನೀರಿಗೆ ಇಳಿಯದಂತೆ ಶಿವಮೊಗ್ಗ (Shivamogga) ಜಿಲ್ಲಾ ಪೊಲೀಸರಿಂದ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ಈಜಾಡುವುದು, ಸೆಲ್ಫಿ ತೆಗೆದುಕೊಳ್ಳದಂತೆ ಮತ್ತು ನೀರಿನ ಹರಿವು ಕಡಿಮೆ ಆಗುವವರೆಗೆ ಭೇಟಿ ನೀಡದಂತೆ ಪ್ರವಾಸಿ ತಾಣಗಳ ಬಳಿ ಪೊಲೀಸರು ಸೂಚನಾ ಫಲಕ ಅಳವಡಿಸಿದ್ದಾರೆ. ಜೊತೆಗೆ ಪ್ರವಾಸಿ ತಾಣಗಳ ಬಳಿ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.
ನಾಳೆ ಶಾಲಾ ಕಾಲೇಜುಗಳಿಗೆ ರಜೆ
ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಹೊಸನಗರ ತಾಲ್ಲೂಕಿನಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಆದೇಶ ಹೊರಡಿಸಿದ್ದಾರೆ.
ತೀರ್ಥಹಳ್ಳಿ ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರಿ ಮಳೆ ಹಿನ್ನೆಲೆ ಶಿವಮೊಗ್ಗ ತಾಲೂಕಿನ ಗಾಜನೂರು ತುಂಗಾ ಜಲಾಶಯದ ಒಳ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ತುಂಗಾ ಅಣೆಕಟ್ಟೆಗೆ 61,757 ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದೆ.
ಅತಿಯಾದ ಮಳೆಗೆ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಗದ್ದೆ ಬಳಿ ಮಣ್ಣು ಗುಡ್ಡ ಕುಸಿದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಮಾವಿನಗದ್ದೆ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಭಾರಿ ಮಳೆಗೆ ತಡೆಗೋಡೆ ಕೊಚ್ಚಿ ಹೋಗಿದೆ. ಸದ್ಯ ಸುಗಮ ಸಂಚಾರಕ್ಕೆ ಡಾಂಬರ್ ರಸ್ತೆಗೆ ಮರಳು ಚೀಲಗಳಿಂದ ಅಧಿಕಾರಿಗಳು ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಅವಘಡ ಸಂಭವಿಸುವ ಮೊದಲು ದುರಸ್ತಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.