ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದೆ. ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್ಆರ್ ಪುರ, ಮೂಡಿಗೆರೆ ಕಳಸ ತಾಲೂಕಿನಾದ್ಯಂತ ಧಾರಾಕಾರವಾಗಿ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು ಮಲೆನಾಡು ಭಾಗದ ಜನಜೀವನ ಅಸ್ತವ್ಯಸ್ತವಾಗಿದೆ. ಇದೀಗ ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆ ಬಂದ್ ಆಗಿದೆ.
ಶೃಂಗೇರಿಯಿಂದ ಹೊರನಾಡು ಮುಖ್ಯ ರಸ್ತೆ ಬಂದ್
ಕಳಸ ಪಟ್ಟಣಕ್ಕೆ ಸಂಪರ್ಕಿಸುವ ಮತ್ತೊಂದು ರಸ್ತೆಯೂ ಬಂದ್ ಆಗಿದೆ. ಬಿಳಾಲುಕೊಪ್ಪದಿಂದ ಬಸರೀಕಟ್ಟೆಗೆ ಹೋಗುವ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆ ಬಂದ್ ಆಗಿದೆ. ಮಧ್ಯಾಹ್ನ ಬಳಿಕ ಕಳಸ, ಕುದುರೆಮುಖ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.
ಅಂಗನವಾಡಿ, ಶಾಲಾ ಕಾಲೇಜುಗಳಿಗೆ ನಾಳೆ ರಜೆ
ಮಲೆನಾಡು ಭಾಗದ 6 ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ನಗರ, ಅಂಬಳೆ ಹೋಬಳಿ, ಲಕ್ಯಾ ಹೋಬಳಿ ಹೊರತು ಪಡಿಸಿ ಚಿಕ್ಕಮಗಳೂರು, ಮೂಡಿಗೆರೆ, ಕಳಸ,ಶೃಂಗೇರಿ, ಕೊಪ್ಪ, ಎನ್ಆರ್ ಪುರ ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಮುಂಜಾಗ್ರತವಾಗಿ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಕ್ಷಣಕ್ಷಣಕ್ಕೂ ಅವಾಂತರಗಳನ್ನೇ ಸೃಷ್ಟಿ ಮಾಡುತ್ತಿರುವ ವರುಣಾರ್ಭಟಕ್ಕೆ ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಆರ್ಭಟಿಸುತ್ತಿದೆ. ತುಂಗಾ ನದಿ ಶೃಂಗೇರಿ ಶಾರದಾ ಮಠದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆ ಸೃಷ್ಟಿ ಮಾಡಿದರೆ ಭದ್ರಾ ನದಿ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮೇಲೆ ಹರಿಯುತ್ತಿದ್ದು ಕಳೆದ 12 ಗಂಟೆಯಿಂದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು ಕಳಸ-ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.
ಮಳೆ ಆರ್ಭಟಕ್ಕೆ ಜಿಲ್ಲೆಯಾದ್ಯಂತ 180ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದು ಮನೆ ಕಳೆದುಕೊಂಡ ಜನರು ಪರದಾಡಿವಂತೆ ಮಾಡಿದೆ. ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಂತಿ ಗ್ರಾಮದಲ್ಲಿ ನೋಡ ನೋಡುತ್ತಿದ್ದಂತೆ ಗ್ರಾಮ ಪಂಚಾಯತಿಯಿಂದ ನಿರ್ಮಿಸಿ ಬಾಡಿಗೆಗೆ ನೀಡಿದ ಕಟ್ಟಡ ಕುಸಿದು ಬಿದ್ದಿದ್ದು. ಕಟ್ಟಡದ ಹಿಂಭಾಗದ ಗೋಡೆ ಕುಸಿಯುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.