ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್ ಕಾರವಾರ (ಉತ್ತರ ಕನ್ನಡ): ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು. ಸಿಎಂ ಸಿದ್ದರಾಮಯ್ಯ ಜೊತೆ ಸಚಿವರಾದ ಕೃಷ್ಣ ಬೈರೇಗೌಡ, ಮಂಕಾಳ ವೈದ್ಯ, ಸತೀಶ್ ಜಾರಕಿಹೊಳಿ ಸಾಥ್ ನೀಡಿದರು.
ಸಿಎಂ ಭೇಟಿ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತ್ತೆ ಗುಡ್ಡ ಕುಸಿಯುವ ಆತಂಕವಿದ್ದು, ಈ ನಡುವೆ ನಾಯಕರುಗಳು ಸ್ಥಳದ ವೀಕ್ಷಣೆ ನಡೆಸಿದರು.
ಇಂತಹ ದುರ್ಘಟನೆ ನೋಡಿಲ್ಲವೆಂದ ಆರ್.ವಿ. ದೇಶಪಾಂಡೆ: ಇದಕ್ಕೂ ಮುನ್ನ ಭೇಟಿ ನೀಡಿದ್ದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ''30 ವರ್ಷದ ರಾಜಕೀಯ ಬದುಕಿನಲ್ಲಿ ಇಂತಹದ್ದೊಂದು ದುರ್ಘಟನೆಯನ್ನು ನೋಡಿರಲಿಲ್ಲ. ಗುಡ್ಡ ಕುಸಿತ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಯಾರ ಮೇಲೂ ಆರೋಪ ಮಾಡುವ ಕೆಲಸವನ್ನು ನಾನು ಮಾಡಲ್ಲ'' ಎಂದು ಹೇಳಿದರು.
''ಗುಡ್ಡ ಕುಸಿತದ ತೆರವು ಕಾರ್ಯವು ನಡೆಯಬೇಕು. ಈಗಾಗಲೇ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸುತ್ತೇನೆ'' ಎಂದರು.
ಸಾಕಷ್ಟು ಮಂದಿ ಗಾಯಗೊಂಡು ಕುಮಟಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೆದ್ದಾರಿಗಾಗಿ ಗುಡ್ಡವನ್ನು ಅವೈಜ್ಞಾನಿಕವಾಗಿ ಕೊರೆಯಲಾಗಿದೆ. ಈ ಬಗ್ಗೆ ಜವಾಬ್ದಾರಿ ಇದ್ದವರು ಟೆಂಡರ್ ಹಂತದಲ್ಲೇ ನಿಯಮ ಹಾಕಿ ಸರಿಪಡಿಸಬೇಕು. ಇಂಜಿನಿಯರ್‌ಗಳು ಕಾಮಗಾರಿ ಹಂತದಲ್ಲೇ ಈ ಬಗ್ಗೆ ಗಮನಹರಿಸಬೇಕು. ರಾಜಕಾರಣಿಗಳು ತಾಂತ್ರಿಕ ಜ್ಞಾನ ಇರದೇ ಹೇಳಿಕೆ ನೀಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ಗುಡ್ಡಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಬೆಂಗಳೂರಿನಲ್ಲಿ ಪರಿಹಾರದ ಕುರಿತು ನಿರ್ಧರಿಸುತ್ತಾರೆ'' ಎಂದು ತಿಳಿಸಿದರು.
''ಈ ದುರಂತದಲ್ಲಿ ಅನಾವಶ್ಯಕ ಚರ್ಚೆ ಮಾಡಬಾರದು. ಈಗಾಗಲೇ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಕಾಣೆಯಾದ ಅರ್ಜುನ್ ಅವರ ಕುಟುಂಬದವರು ತಿಳಿಸಿದ ಲೊಕೆಷನ್ನಲ್ಲಿಯೇ ಶೋಧ ಕಾರ್ಯ ನಡೆಯುತ್ತಿದೆ. ವೈಜ್ಞಾನಿಕವಾಗಿ ಅಭಿವೃದ್ಧಿ ಕಾರ್ಯ ಮಾಡಬೇಕು. ಅದಕ್ಕೆ ಸೂಕ್ತ ಚರ್ಚೆಯ ಅವಶ್ಯಕತೆ ಇದೆ. ಶೋಧ ಕಾರ್ಯ ಪಕ್ಷಾತೀತವಾಗಿ ನಡೆಯುತ್ತಿದೆ'' ಎಂದು ಹೇಳಿದರು.