ದಾವಣಗೆರೆ: ಜಿಲ್ಲೆಯ ಹೊನ್ನಾಳಿ (Honnali) ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ (Rain) 3000ಕ್ಕೂ ಅಧಿಕ ಅಡಿಕೆ ಮರಗಳು ಹಾಗೂ 200ಕ್ಕೂ ಅಧಿಕ ತೆಂಗಿನ ಮರಗಳು ಧರೆಗುರುಳಿವೆ. ಬೆಳೆ ಹಾನಿ ಪ್ರದೇಶಕ್ಕೆ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (MP Renukacharya) ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶನಿವಾರ ಸುರಿದ ಧಾರಾಕಾರ ಮಳೆಗೆ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮವೊಂದರಲ್ಲೇ 3 ಸಾವಿರಕ್ಕೂ ಅಧಿಕ ಅಡಿಕೆ ಮರ ಹಾಗೂ 200ಕ್ಕೂ ಅಧಿಕ ತೆಂಗಿನ ಮರಗಳು ಧರೆಗುರುಳಿವೆ. ಪ್ರತೀ ಎಕರೆಗೆ 50 ರಿಂದ 100 ಮರಗಳು ಧರೆಗೆ ಉರುಳಿವೆ. ಹಾಗೆಯೇ ಪ್ರತಿ ಎಕರೆಗೆ 4 ರಿಂದ 5 ಲಕ್ಷ ರೂ. ಮೌಲ್ಯದ ಅಡಿಕೆ ಬೆಳೆ ಹಾನಿಯಾಗಿದೆ.
ಫಲಕ್ಕೆ ಬಂದ ಅಡಿಕೆ ಮರ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ 16 ವರ್ಷಗಳ ಕಾಲ ಮಕ್ಕಳಂತೆ ಸಾಕಿದ್ದ ಅಡಿಕೆ ಮರ ಧರೆಗುರುಳಿದ್ದನ್ನು ಕಂಡು ರೈತರು ಕಣ್ಣೀರು ಹಾಕಿದ್ದಾರೆ
ಬೆಳೆ ಹಾನಿಯಾದ ತೋಟಗಳಿಗೆ ರೈತರೊಂದಿಗೆ ರೇಣುಕಾಚಾರ್ಯ ಭೇಟಿ ನೀಡಿ, ರೈತರಿಗೆ ಧೈರ್ಯ ತುಂಬಿದ್ದಾರೆ. ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.