(ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್ ಶಿವಮೊಗ್ಗ | ಮನರೇಗಾ ಹಣ ದುರುಪಯೋಗ ಸಾಬೀತು: ಗ್ರಾಪಂ ಸಿಬ್ಬಂದಿ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದ ಜಿಪಂ!

ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್   ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹುರುಳಿ ಗ್ರಾಮ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಆಗಿರುವ ಗುರುನಾಥ ಎಂಬ ಸಿಬ್ಬಂದಿ ಮನರೇಗಾ ಹಣ ದುರುಪಯೋಗಪಡಿಸಿರುವ ಬಗ್ಗೆ ಕೆಆರ್‌ಎಸ್‌ ಪಕ್ಷದ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರರಾದ ಮಂಜುನಾಥ್ ಎಂಬುವವರು ದೂರು ಈ ಹಿಂದೆ ನೀಡಿದ್ದರು.ಮನರೇಗಾ ಯೋಜನೆಯ ಹಣವನ್ನು ಗ್ರಾಮ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿ ದುರುಪಯೋಗ ಪಡಿಸಿದ್ದು ಸಾಬೀತಾಗಿದ್ದರೂ, ಸಿಬ್ಬಂದಿಯ ವಿರುದ್ಧ ಶಿವಮೊಗ್ಗ ಜಿಲ್ಲಾ ಪಂಚಾಯತ್ ಈವರೆಗೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ದೂರಿನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಗುರುನಾಥ್ ವೈಯಕ್ತಿಕ ಫಲಾನುಭವಿಗಳಿಂದ ಹಣವನ್ನು ಪಡೆದು ಬೇರೆ ಬೇರೆ ಕೂಲಿ ಕಾರ್ಮಿಕರ ಹೆಸರಿನಲ್ಲಿ ಹಾಗೂ ಆತನ ಪತ್ನಿ ಹೇಮಾವತಿಯವರ ಹೆಸರಿಗೆ ಎನ್‌ಎಂಆರ್ ಹಣ ಹಾಕಿ ಹಣ ದುರುಪಯೋಗ ಪಡಿಸಿರುವುದಾಗಿ ಉಲ್ಲೇಖಿಸಿದ್ದರು. ಅಲ್ಲದೇ, ಫಲಾನುಭವಿಗಳಿಂದ ಲಂಚ ಪಡೆದಿರುವ ಬಗ್ಗೆಯೂ ಉಲ್ಲೇಖಿಸಿದ್ದರು. ಈ ದೂರಿನ ಆಧಾರದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಒಂಬುಡ್ಸ್‌ಮನ್ ಅಧಿಕಾರಿ ಪಿ ಡಿ ಗಣಪತಿ ಎಂಬುವವರು ವಿಚಾರಣೆ ನಡೆಸಿ, 2024ರ ಜನವರಿ 22ರಂದು ತನಿಖಾ ವರದಿಯನ್ನು ಸಂಬಂಧಪಟ್ಟವರಿಗೆ ಸಲ್ಲಿಸಿದ್ದರು.

ಒಂಬುಡ್ಸ್‌ಮನ್ ವರದಿಯಲ್ಲಿ ಏನಿದೆ?

ಒಂಬುಡ್ಸ್‌ಮನ್ ಅವರು ತಮ್ಮ ತನಿಖಾ ವರದಿಯಲ್ಲಿ ಗ್ರಾಮ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಗುರುನಾಥ್ ಅವರು ತನ್ನ ಪತ್ನಿಯ ಹೆಸರಿನಲ್ಲಿ ಜಾಬ್ ಮಾಡಿಸಿದ್ದಾರೆ. ಅಲ್ಲದೇ, ಪತಿಯ ಜಾಗದ ಕಾಲಂನಲ್ಲಿ ತನ್ನ ಹೆಸರನ್ನೂ ಕೂಡ ಸೇರಿಸಿದ್ದಾರೆ. ಪತ್ನಿಯ ಹೆಸರಿನಲ್ಲಿದ್ದ ಕಾರ್ಡಿನಲ್ಲಿ ಕೆಲಸ ಮಾಡದೇ ಇದ್ದರೂ ಕೂಡ ಹಾಜರಾತಿಯನ್ನು ಹಾಕಿದ್ದಾರೆ. ಜಾಬ್ ಕಾರ್ಡ್ ಪ್ರಕಾರ, 2019 ರಿಂದ ಮೇ 2023ರವರೆಗೂ ಕೆಲಸ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟ ದಾಖಲೆ ಇಲ್ಲ. ಕೆಲಸ ಮಾಡುತ್ತಿರುವ ಫೋಟೋ ಕೂಡ ಇರುವುದಿಲ್ಲ. ಅಲ್ಲದೇ, ನಿರುದ್ಯೋಗ ಭತ್ಯೆಯನ್ನು ಅವರ ಖಾತೆಗೆ ಹಾಕಿ, ನೇರವಾಗಿ ಅಕ್ರಮ ಎಸಗಿರುವುದು ಕಂಡುಬಂದಿದೆ. ಆದ್ದರಿಂದ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದಿದ್ದರು.



ಅಲ್ಲದೇ, 2019 ರಿಂದ ಕೂಲಿ ಕಾರ್ಮಿಕರ ಒಟ್ಟು ₹1,43,800ಗಳ ನಿರುದ್ಯೋಗ ಭತ್ಯೆಯನ್ನು ನೀಡಬೇಕು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅಧಿನಿಯಮದಂತೆ ಇದಕ್ಕೆ ಕಾರಣರಾಗಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ 71,900₹ ಮತ್ತು ಡೇಟಾ ಎಂಟ್ರಿ ಆಪರೇಟರ್ ಗುರುನಾಥ 71,900₹ ವಸೂಲಾತಿ ಮಾಡಿ ಕರ್ನಾಟಕ ಸರ್ಕಾರದ ಎಂಪಿಲೋಯೇಮೆಂಟ್ ಗ್ಯಾರಂಟಿ ಫಂಡ್‌ಗೆ ಜಮಾ ಮಾಡುವಂತೆ ಶಿಫಾರಸ್ಸು ಮಾಡಿದ್ದರು.

ಮನರೇಗಾ ಯೋಜನೆಯ ತಂತ್ರಾಂಶವನ್ನು ಆಗಿಂದಾಗ್ಗೆ ಪರಿಶೀಲಿಸದೇ ಕೂಲಿ ಕಾರ್ಮಿಕರಿಗೆ ಕೆಲಸವನ್ನು ನೀಡದೇ ನಿರುದ್ಯೋಗ ಭತ್ಯೆಯ ಅಕ್ರಮಕ್ಕೆ ಕಾರಣರಾಗಿರುವ ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಗೆ ಗಂಭೀರವಾದ ಎಚ್ಚರಿಕೆಯನ್ನು ನೀಡಿ, ಅವರ ಮೇಲೆ ನಿಯಮಾವಳಿಯಂತೆ ಅಗತ್ಯ ಕ್ರಮ ವಹಿಸಲು ಶಿಫಾರಸ್ಸು ಮಾಡಿ ಪ್ರಕರಣವನ್ನು ವಿಲೇವಾರಿ ಮಾಡಲು ಶಿಫಾರಸ್ಸು ಮಾಡಿದ್ದರು. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ವರದಿಯಲ್ಲಿ ತಿಳಿಸಿದ್ದರು. ಅಲ್ಲದೇ, ಫಲಾನುಭವಿಗಳಿಂದ ಲಂಚ ಪಡೆದಿರುವ ಬಗ್ಗೆಯೂ ಬಂದಿದ್ದ ದೂರನ್ನು ಉಲ್ಲೇಖಿಸಿದ್ದ ಒಂಬುಡ್ಸ್‌ಮನ್ ಅವರು, ಈ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ವರದಿಯಲ್ಲಿ ತಿಳಿಸಿದ್ದರು.

ಆದರೆ, ಕಂಪ್ಯೂಟರ್ ಆಪರೇಟರ್ ಸಿಬ್ಬಂದಿ ದುರುಪಯೋಗಪಡಿಸಿದ್ದು ಒಂಬುಡ್ಸ್‌ಮನ್ ತನಿಖೆಯಲ್ಲಿ ಸಾಬೀತಾಗಿದ್ದರೂ, ಸಿಬ್ಬಂದಿಯ ವಿರುದ್ಧ ಶಿವಮೊಗ್ಗ ಜಿಲ್ಲಾ ಪಂಚಾಯತ್ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರುದಾರ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತ ಮಂಜುನಾಥ್  ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.


 

PGK

Post a Comment

Previous Post Next Post