ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಲಭ್ಯವಾಗುತ್ತಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಗೃಹ ಸಚಿವ ಆರ್ ಪರಮೇಶ್ವರ ಅವರು 7 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿದ್ದಾರೆ.
ದರ್ಶನ್‌ಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಸಿಗುತ್ತಿರುವ ಸುದ್ದಿಯು ರಾಷ್ಟ್ರವ್ಯಾಪ್ತಿಯಲ್ಲಿ ಸುದ್ದಿಯಾಗುತ್ತಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರ್ ಪರಮೇಶ್ವರ, “ನಾವು ತಪ್ಪಿತಸ್ಥರನ್ನು ರಕ್ಷಿಸುವ ವಿಚಾರವೇ ಇಲ್ಲ. ನಾನು ಏಳು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿದ್ದೇನೆ” ಎಂದು ತಿಳಿಸಿದರು.
“ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿರ್ದಾಕ್ಷಿಣ್ಯವಾಗಿ ಅಗತ್ಯ ಶಿಸ್ತು ಕ್ರಮ ಜರುಗಿಸಲಾಗುವುದು” ಎಂದು ಹೇಳಿದರು. ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತನ್ನ ಕೈಯಲ್ಲಿ ದೊಡ್ಡ ಕಾಫಿ ಮಗ್, ಸಿಗರೇಟ್ ಹಿಡಿದು ನಗುತ್ತಾ ಮಾತನಾಡುತ್ತಿರುವ ಫೋಟೊಗಳು ವೈರಲ್ ಆಗಿದ್ದವು. ದರ್ಶನ್ ಜೊತೆಗೆ ರೌಡಿ ಶೀಟರ್ ಕೂಡಾ ಇದ್ದನು.
ಇದರ ಜೊತೆಗೆ ದರ್ಶನ್ ಮತ್ತೊಬ್ಬ ರೌಡಿಯೊಂದಿಗೆ ವಿಡಿಯೊ ಕಾಲ್ ಮಾಡಿ ಮಾತನಾಡಿರುವ ದೃಶ್ಯಗಳಿರುವ ವಿಡಿಯೋ ಕೂಡಾ ವೈರಲ್ ಆಗಿತ್ತು.
ಇದರಿಂದಾಗಿ “ಬಡವರಿಗೆ ಮಾತ್ರ ಕಾನೂನು ಅನ್ವಯವಾಗುತ್ತದೆಯೇ, ಶ್ರೀಮಂತರಿಗೆ ಯಾವ ನಿಯಮವೂ ಅನ್ವಯವಾಗುವುದಿಲ್ಲವೇ” ಎಂದು ನೆಟ್ಟಿಗರು ಪ್ರಶ್ನಿಸಿದ್ದರು.