ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್:
ಕಾರವಾರ: ರಾಷ್ಟ್ರೀಯ ಹೆದ್ದಾರಿ (National Highway) 66ರ ಶಿರೂರು (Shiruru) ಭಾಗದಲ್ಲಿ ಮತ್ತೆ ಭೂ ಕುಸಿತ (Landslide) ಸಂಭವಿಸಿದೆ. ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಭೂ ಕುಸಿತವಾಗುವ ವರದಿಯನ್ನು ನೀಡಿದೆ.ಒಂದೆಡೆ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ವಾಹನಗಳಾದರೆ, ಮತ್ತೊಂದೆಡೆ ಅಲ್ಲಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ಶಿರೂರಿನ ಹೆದ್ದಾರಿಯ ಮತ್ತೊಂದು ಭಾಗದಲ್ಲಿ ನಾಲ್ಕಕ್ಕೂ ಹೆಚ್ಚು ಕಡೆ ಭೂ ಕುಸಿತವಾಗುತ್ತಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಜುಲೈ 16 ರಂದು ಭೂ ಕುಸಿತವಾಗಿ 11 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಮೂರು ಜನರ ಶವ ಶೋಧಕ್ಕಾಗಿ ಕಾರ್ಯಾಚರಣೆ ಮಾಡಲಾಗಿದೆ. ಆದರೆ ಕಳೆದ ಒಂದು ತಿಂಗಳ ಹಿಂದೆ ಜಿಎಸ್‌ಐ ತಜ್ಞರ ತಂಡ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಭೂ ಕುಸಿತದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಾದುಹೋಗುವ ಕಾರವಾರದ ಬಿಣಗ, ಅಂಕೋಲದ ಶಿರೂರು, ಹೊನ್ನಾವರದ ಗುಣವಂತೆ ಹೆದ್ದಾರಿ, ಭಟ್ಕಳದ ಹೆದ್ದಾರಿ ಭಾಗದಲ್ಲಿ ಮತ್ತೆ ಭೂ ಕುಸಿತವಾಗಲಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿತ್ತು. ಜೊತೆಗೆ ಜಿಲ್ಲೆಯ ಭೂ ಕುಸಿತ ಭಾಗವನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ. ಕಾರವಾರ, ಅಂಕೋಲ, ಹೊನ್ನಾವರ, ಭಟ್ಕಳ ಭಾಗದ ಗುಡ್ಡ ಪ್ರದೇಶದಲ್ಲಿ ಮತ್ತೆ ಭೂ ಕುಸಿತ ಯಾವ ಸಂದರ್ಭದಲ್ಲಿಯಾದರೂ ಆಗಬಹುದು ಎಂದು ಎಚ್ಚರಿಸಿದೆ.
ಶಿರೂರಿನಲ್ಲಿ ಜುಲೈ 16ರಲ್ಲಿ ಭೂ ಕುಸಿತದಿಂದ ದುರಂತ ಸಾವು ಕಂಡ 11 ಜನರಲ್ಲಿ ಮೂರು ಜನರ ಶವ ಶೋಧಕಾರ್ಯ ಇನ್ನು ನಡೆಯಬೇಕಿದೆ. ಕೇರಳ (Kerela) ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿ ಜಗನ್ನಾಥ್ ಲೋಕೇಶ್ ಶವ ಪತ್ತೆಯಾಗಬೇಕಿದೆ. ಸದ್ಯ ಮಳೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸಂಪೂರ್ಣ ಸ್ಥಗಿತ ಮಾಡಲಾಗಿದೆ. ಹೆದ್ದಾರಿಯಲ್ಲಿ ಘಟನೆ ನಡೆದ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಇದೇ ಭಾಗದಲ್ಲಿ ಮತ್ತೆ ಭೂ ಕುಸಿತವಾಗುವುದರಿಂದ ಶಿರೂರಿನ ಗುಡ್ಡದ ಪ್ರದೇಶದ ನಿವಾಸಿಗಳು ಹಾಗೂ ಗಂಗಾವಳಿ ತೀರ ಪ್ರದೇಶದ ಉಳುವೆರೆ ಗ್ರಾಮದ ಜನರಿಗೆ ಬೇರೆಡೆ ವಸತಿ ವ್ಯವಸ್ಥೆ ಮಾಡಿಕೊಳ್ಳುವಂತೆ ಅಂಕೋಲ ತಹಶಿಲ್ದಾರ್ ಆದೇಶ ನೀಡಿದ್ದಾರೆ.