ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್: ಬೆಂಗಳೂರು: ಎಚ್‌ಎಂಟಿಯಿಂದ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಅರಣ್ಯ ಇಲಾಖೆಯು, ಇದರ ಬೆನ್ನಲ್ಲೇ 1,334.33 ಹೆಕ್ಟೇರ್ ಅರಣ್ಯ ಮತ್ತು ಕಂದಾಯ ಭೂಮಿಯನ್ನು ಸರ್ಕಾರಕ್ಕೆ ಹಸ್ತಾಂತರಿಸುವಂತೆ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್)ಗೆ ಸೂಚನೆ ನೀಡಿದೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆಯವರು, ಸಂಸ್ಥೆಯು 1,334.33 ಹೆಕ್ಟೇರ್ ಅರಣ್ಯ ಮತ್ತು ಕಂದಾಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಬೇಕಿದ್ದು, ಅರಣ್ಯ ಇಲಾಖೆಗೆ 1,349.53 ಕೋಟಿ ರೂಪಾಯಿ ಪಾವತಿಸಬೇಕಿದೆ ಎಂದು ಹೇಳಿದರು.
ಈ ಹಿಂದೆ ಕುದುರೆ ಮುಖದಲ್ಲಿ ಗಣಿಗಾರಿಕೆ ನಡೆಸಿದ್ದ ಕೆಐಒಸಿಎಲ್ ಪರಿಸರಕ್ಕೆ ಮಾಡಿರುವ ಹಾನಿಯ ಮೊತ್ತ ಪಾವತಿಸಿಲ್ಲ. ಅಕ್ರಮವಾಗಿ ಲಕ್ಯಾ ಜಲಾಶಯದ ಎತ್ತರ ಹೆಚ್ಚಿಸಿ, ಅರಣ್ಯ ಮುಳುಗಡೆ ಮಾಡಿದ್ದಕ್ಕಾಗಿ ರೂ.119.12 ಕೋಟಿ, ಗಣಿಗಾರಿಕೆಗಾಗಿ ಹೊಸ ಭೂಮಿ ಅಗೆದಿದ್ದಕ್ಕಾಗಿ ರೂ.19.88 ಕೋಟಿ ಸೇರಿದಂತೆ ಮಹಾ ಲೆಕ್ಕಪರಿಶೋಧಕರು ಉಲ್ಲೇಖಿಸಿರುವ ಮೊತ್ತ ಹಾಗೂ ಬಡ್ಡಿ ರೂ.1,349.52 ಕೋಟಿ ಬಾಕಿ ಇದೆ. ಕೆಐಒಸಿಎಲ್ ತನ್ನ ಸ್ವಂತ ಭೂಮಿ 114.30 ಹೆಕ್ಟೇರ್, ಸರ್ಕಾರದ ಕಂದಾಯ ಭೂಮಿ 1,220.03 ಹೆಕ್ಟೇರ್ ಸೇರಿ ಒಟ್ಟು 1334.33 ಹೆಕ್ಟೇರ್ ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು. 670 ಹೆಕ್ಟೇರ್ ಪ್ರದೇಶವನ್ನು ಅಂಕೋಲ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ಗುರುತಿಸಲಾಗಿದೆ ಎಂದು ತಿಳಿಸಿದರು.
ಕಂಪನಿ ಗಣಿ ಉತ್ಖನನ ಆರಂಭಿಸಿದ ವೇಳೆ ಶೇ 27ರಷ್ಟು ಮಣ್ಣನ್ನು ಲಕ್ಯಾ ಡ್ಯಾಂಗೆ ಸುರಿದಿತ್ತು. ಪ್ರಸ್ತುತ ಅಲ್ಲಿ 1,500 ಟನ್ ಮಣ್ಣು ಸಂಗ್ರಹವಾಗಿದೆ. ಅಣೆಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಮಣ್ಣು ಹಾಕಲು ಅನಧಿಕೃತವಾಗಿ ಕಂಪನಿ ಲಕ್ಯಾ ಡ್ಯಾಂ ಎತ್ತರವನ್ನು ಹೆಚ್ಚಿಸಿದ್ದರಿಂದ 340 ಹೆಕ್ಟೇರ್ ಅರಣ್ಯಕ್ಕೆ ಹಾನಿಯಾಗಿದೆ. ಪರಿಷ್ಕರಿಸಿದ ಅದಿರನ್ನು ಮಂಗಳೂರು ಬಂದರಿಗೆ ಸಾಗಿಸಲು ಅನುಮತಿ ಪಡೆಯದೇ ಪೈಪ್‌ಲೈನ್ ಅಳವಡಿಸಲಾಗಿದೆ ಎಂದರು.
ಇದೇ ವೇಳೆ ಕೆಐಒಸಿಎಲ್ ಈಗಾಗಲೇ 500 ಕೋಟಿ ರೂ. ಪಾವತಿಸಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ಖಂಡ್ರೆ, ಇದು ಸಾಕಾಗುವುದಿಲ್ಲ. ಕೆಐಒಸಿಎಲ್ ಕೇಂದ್ರೀಯ ಸಶಕ್ತ ಸಮಿತಿಯ ಲೆಕ್ಕಾಚಾರದ ಪ್ರಕಾರ ಭೂಮಿಯನ್ನು ಹಿಂದಿರುಗಿಸಬೇಕು ಮತ್ತು ನಿಯಮಗಳ ಪ್ರಕಾರ ಪರಿಹಾರವನ್ನು ಪಾವತಿಸಬೇಕು. ಕೆಐಒಸಿಎಲ್ ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿ, ಗಳಿಸಿದ ಲಾಭದಿಂದ ಮೊತ್ತವನ್ನು ಪಾವತಿಸಬಹುದು ಎಂಬ ಪ್ರಸ್ತಾಪವನ್ನು ಮುಂದಿಟ್ಟಿದೆ. ಆದರೆ ಇದು ಸ್ವೀಕಾರಾರ್ಹವಲ್ಲ. ದೇವದಾರಿ ಬೆಟ್ಟವನ್ನು ಗಣಿಗಾರಿಕೆಗೆ ನೀಡಲಾಗುವುದಿಲ್ಲ. ಇತರೆ ಕಂಪನಿಗಳಂತೆ ಕೆಐಒಸಿಎಲ್ ಕೂಡ ಗಣಿಗಾರಿಗೆ ಹರಾಜಿನಲ್ಲಿ ಭಾಗವಹಿಸಬೇಕು. ಕಂಪನಿಯು ದಿವಾಳಿಯಾಗಿರುವ ಕಾರಣ, ವಿವಾದದಲ್ಲಿರುವ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ಹೆಚ್ಎಂಟಿಯಂತೆಯೇ ಈ ಕಂಪನಿ ಕೂಡ ನಿಯಮ ಉಲ್ಲಂಘಿಸಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಕೆಐಒಸಿಎಲ್ ನ ಪ್ರಸ್ತಾವನೆಯನ್ನು ಅಂಗೀಕರಿಸಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಅರಣ್ಯೀಕರಣಕ್ಕಾಗಿ ದೀರ್ಘಾವಧಿ ಬಾಕಿ, ದಂಡದ ಬಡ್ಡಿ ಮತ್ತು ಭೂಮಿಯನ್ನು ಹಿಂದಿರುಗಿಸಬೇಕಾಗಿರುವುದರಿಂದ ಕಡತವನ್ನು ನಿಲ್ಲಿಸಲಾಗಿದೆ. ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಎನ್‌ಎಂಡಿಸಿ ಹಾಗೂ ಖಾಸಗಿ ಕಂಪನಿಗಳಿಂದ ಅದಿರು ಖರೀದಿಸಬಹುದು. ಪರಿಸರ ಉಳಿಸಲು ಇಂತಹ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ.
ಎಚ್‌ಎಂಟಿ ವಿಚಾರದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ಕೆಐಒಸಿಎಲ್ ವಿಷಯದಲ್ಲಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಕರ್ನಾಟಕ ಸರ್ಕಾರಕ್ಕೆ ಸೂಕ್ತ ಪರಿಹಾರವನ್ನು ಪಡೆಯಲು ಸಹಾಯ ಮಾಡಬಹುದು, ಪರಿಹಾರ ಸಿಕ್ಕರೆ ಅದನ್ನು ಅರಣ್ಯೀಕರಣ ಮತ್ತು ರಾಜ್ಯದ ಹಸಿರು ಹೊದಿಕೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ ಎಂದು ಹೇಳಿದರು.