ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್ :-ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಎಲ್ಲಾ ಮೂರು ಕ್ಷೇತ್ರಗಳಲ್ಲೂ ಆಡಳಿತರೂಢ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೂ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಗೆಲುವು ದಾಖಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ, ಕೇಂದ್ರ ಸಚಿವ ಎಚ್ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಹ್ಯಾಟ್ರಿಕ್ ಸೋಲಾಗಿದೆ.
ಸಿಪಿ ಯೋಗೇಶ್ವರ್ ಅವರು ನಿಖಿಲ್ ಕುಮಾರಸ್ವಾಮಿ ವಿರುದ್ಧ 25,413 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ, ನಟ-ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು 87,229 ಮತಗಳನ್ನು ಪಡೆದರೆ, ಯೋಗೀಶ್ವರ ಅವರು 1,12,642 ಮತಗಳನ್ನು ಪಡೆದಿದ್ದಾರೆ.
ಈ ಭಾಗದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಯೋಗೀಶ್ವರ್ ಅವರು, ನಟ-ರಾಜಕಾರಣಿಯೂ ಆಗಿದ್ದು, ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.
ಚನ್ನಪಟ್ಟಣದಲ್ಲಿ ಗೆಲುವಿನ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಪಿ ಯೋಗೇಶ್ವರ್ ಅವರು, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ತಮ್ಮ ಪ್ರತಿಷ್ಠೆಗೆ ಅವರ ಮಗ ನಿಖಿಲ್ ಕುಮಾರಸ್ವಾಮಿಯನ್ನು ಬಲಿಕೊಟ್ಟಿದ್ದಾರೆ ಎಂದು ಎಂದರು.
ಕುಮಾರಸ್ವಾಮಿ ಮನಸು ಮಾಡಿದ್ದರೆ ಮಗನನ್ನು ಮಂಡ್ಯದಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಆದರೆ, ಕೇಂದ್ರ ಸಚಿವರಾಗುವ ತವಕದಿಂದ ತಾವೇ ಅಲ್ಲಿ ಸ್ಪರ್ಧಿಸಿದರು. ಈಗ ಮಗನನ್ನು ಬಲಿಕೊಟ್ಟರು ಎಂದು ಯೋಗೇಶ್ವರ್ ಟೀಕಿಸಿದರು.
ನಿಖಿಲ್ ಕುಮಾರಸ್ವಾಮಿ ,ಸೋಲಿನ ಮೂಲಕ ಜೆಡಿಎಸ್ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ಸಿಪಿ ಯೋಗೇಶ್ವರ್ ಹೇಳಿದರು.
ದೇವೇಗೌಡರು ದೈತ್ಯ ಶಕ್ತಿ ಎಂದು ಬಹಳ ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ಅದು ಸತ್ಯ. ಆದರೆ, ಅವರಿಗೆ ವಯಸ್ಸಾಗಿದೆ. ಈ ಕಾರಣದಿಂದ ಅವರನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಈಗ ಅವರು ವಿಶ್ರಾಂತ ಜೀವನ ನಡೆಸಲು ಸೂಕ್ತ ಕಾಲ ಎಂದರು.
ನಾನು ಹಿಂದೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಾ. ಮಂಜುನಾಥ್ ಪರ ಕೆಲಸ ಮಾಡಿದ್ದೆ. ಅದರಿಂದಾಗಿ ಡಿಕೆ ಸುರೇಶ್ಗೆ ಸೋಲಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಅದೇ ಡಿಕೆ ಸುರೇಶ್ ಹೆಗಲಿಗೆ ಹೆಗಲು ಕೊಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ಡಿಕೆ ಸಹೋದರರ ಸಹಕಾರಕ್ಕೆ ಧನ್ಯವಾದ ಎಂದು ಯೋಗೇಶ್ವರ್ ಹೇಳಿದರು.