(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್)ಪಶ್ಚಿಮ ಘಟ್ಟದ 153.8 ಚದರ ಕಿ.ಮೀ.ಅರಣ್ಯ ನಾಶ!!

 


 ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್:- ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ರಾಜ್ಯದ ಹತ್ತು ಜಿಲ್ಲೆಗಳ ಪೈಕಿ ಆರರಲ್ಲಿ ಅರಣ್ಯ ನಾಶ ತೀವ್ರವಾಗಿದೆ. 2013ರಿಂದ 2023ರ ನಡುವೆ ಆರು ಜಿಲ್ಲೆಗಳಲ್ಲಿ 153.80 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ಇಲ್ಲವಾಗಿದೆ. ಕೇಂದ್ರ ಸರ್ಕಾರವು ಈಚೆಗೆ ಬಿಡುಗಡೆ ಮಾಡಿದ ‘ಭಾರತೀಯ ಅರಣ್ಯ ಸ್ಥಿತಿಗತಿ ವರದಿ-2023’ರಲ್ಲಿ ಈ ಮಾಹಿತಿ ಇದೆ. ಹೆಚ್ಚು ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ಮೊದಲ ಸಾಲಿನಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 74.54 ಚದರ ಕಿ.ಮೀ., ಕೊಡಗಿನಲ್ಲಿ 33.40 ಚದರ ಕಿ.ಮೀ., ಬೆಳಗಾವಿಯಲ್ಲಿ 24.91 ಚದರ ಕಿ.ಮೀ. ಮತ್ತು ಮೈಸೂರಿನಲ್ಲಿ 15.28 ಚದರ ಕಿ.ಮೀ.ನಷ್ಟು ಅರಣ್ಯ ನಾಶವಾಗಿದೆ. ಹಾಸನ ಮತ್ತು ಚಾಮರಾಜನಗರದಲ್ಲಿ ಅರಣ್ಯದ ವಿಸ್ತೀರ್ಣ ಸ್ವಲ್ಪ ಕುಸಿದಿದೆ.

ಇಷ್ಟೂ ಜಿಲ್ಲೆಗಳಲ್ಲಿ ‘ಅತಿದಟ್ಟಾರಣ್ಯ’ದ ವ್ಯಾಪ್ತಿ ಹತ್ತು ವರ್ಷಗಳಲ್ಲಿ ಹೆಚ್ಚಾಗಿದೆ. ಆದರೆ ‘ದಟ್ಟಾರಣ್ಯ’ದ ವ್ಯಾಪ್ತಿ ಸ್ವಲ್ಪ ಕುಸಿದಿದೆ. ಪಶ್ಚಿಮ ಘಟ್ಟದ ಅಂಚಿನಲ್ಲಿರುವ ‘ಸಾಧಾರಣ ಅರಣ್ಯ’ವು ಜನವಸತಿ ಮತ್ತು ವಾಣಿಜ್ಯ ಬೆಳೆ ಚಟುವಟಿಕೆ ಪ್ರದೇಶಗಳಿಗೆ ಹೊಂದಿಕೊಂಡಿದ್ದು, ಇಲ್ಲೇ ಅತಿಹೆಚ್ಚು ಅರಣ್ಯ ನಾಶವಾಗಿದೆ. ಮರಗಳ ಹಸಿರಿನ ಹೊದಿಕೆ ಶೇ 10ರಿಂದ ಶೇ40ರಷ್ಟು ಇರುವ ಕಾಡನ್ನು ‘ಸಾಧಾರಣ ಅರಣ್ಯ’ ಎಂದು ವರ್ಗೀಕರಿಸಲಾಗಿದ್ದು, ಪಶ್ಚಿಮ ಘಟ್ಟದ ಶೋಲಾ ಕಾಡುಗಳೂ ಇದರ ವ್ಯಾಪ್ತಿಗೆ ಬರುತ್ತವೆ. ವಾಣಿಜ್ಯ ಬೆಳೆ ಪ್ರದೇಶಗಳಿಗೆ ಹೊಂದಿಕೊಂಡಿರುವ ಈ ಅರಣ್ಯ ಪ್ರದೇಶಗಳಿಗೆ ಆಕ್ರಮಣಕಾರಿ ಸಸ್ಯಪ್ರಬೇಧಗಳು ದಾಟಿಕೊಂಡಿವೆ. ಇದರಿಂದ ಸ್ಥಳೀಯ ಅರಣ್ಯ ಸಸಿ, ಮರ, ಹುಲ್ಲು ಪ್ರಬೇಧಗಳಿಗೆ ಮತ್ತು ವನ್ಯಜೀವಿಗಳಿಗೆ ಕಂಟಕ ಎದುರಾಗಿದೆ ಎಂಬ ವಿವರ ವರದಿಯಲ್ಲಿದೆ. 




PGK

Post a Comment

Previous Post Next Post