ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್:(ಮಧ್ಯಪ್ರದೇಶ)- ಮಾಡಿದ ತಪ್ಪನ್ನು ಒಪ್ಪಿಕೊಂಡ ವ್ಯಕ್ತಿ ಕ್ಷಮೆಯಾಚಿಸಿದ್ದು, ಆತನಿಗೆ 1 ತಿಂಗಳಲ್ಲಿ 50 ಗಿಡ ನೆಟ್ಟು 4 ಅಡಿ ಎತ್ತರಕ್ಕೆ ಬೆಳೆಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 50 ದೇಶೀಯ ಗಿಡಗಳನ್ನು ನೆಡಲು ಜಾಗ ಕೂಡ ಸೂಚಿಸಲಾಗಿದೆ. ಅರಣ್ಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಈ ಶಿಕ್ಷೆ ಜಾರಿಗೆ ತರಲು ಹೈಕೋರ್ಟ್ ಆದೇಶಿಸಿದ್ದು ಇಡೀ ದೇಶದ ಗಮನ ಸೆಳೆದಿದೆ.
50 ದೇಶೀಯ ಗಿಡಗಳನ್ನು ನೆಡಲು ಜಾಗ ಕೂಡ ಸೂಚಿಸಿದ ಹೈಕೋರ್ಟ್
ಮಾಡಿದ ತಪ್ಪಿಗಾಗಿ ಕ್ಷಮಾಪಣೆ ಕೇಳಿದ್ದನ್ನು ಹೈಕೋರ್ಟ್ ಒಪ್ಪಿಕೊಂಡಿದೆ
ಇದೆಲ್ಲಾ ಸ್ಥಳೀಯ ಅರಣ್ಯಾಧಿಕಾರಿಗಳ ಕಣ್ಗಾವಲಿನಲ್ಲಿ ನಡೆಯಬೇಕು.
ಸಾಹು ಎಂಬ ವ್ಯಕ್ತಿ ಮೇಲೆ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮಧ್ಯಪ್ರದೇಶದ ಹೈಕೋರ್ಟ್, ಸಾಹು ಕ್ಷಮಾಪಣೆಯನ್ನ ಒಪ್ಪಿಕೊಂಡಿದೆ. ಆದರೆ ಆಗಿರುವ ಪ್ರಮಾದಕ್ಕೆ ನೀವು 1 ತಿಂಗಳಲ್ಲಿ 50 ಗಿಡಗಳನ್ನು ನೆಡಬೇಕು. 50 ಗಿಡ ನೆಡಲು ಮೊರೆನಾ ಜಿಲ್ಲೆಯ ಸಂಭಾಲ್ಗಢ ಪ್ರದೇಶವನ್ನು ಸೂಚಿಸಲಾಗಿದೆ.ಆರೋಪಿಯು 50 ಗಿಡಗಳನ್ನು ನೆಡುವುದರ ಜೊತೆಗೆ ಅದು ಕನಿಷ್ಠ 4 ಅಡಿ ಎತ್ತರಕ್ಕೆ ಬೆಳೆಯುವವರೆಗೂ ಕಾಯಬೇಕು. ಈ ಕಾರ್ಯ ಸ್ಥಳೀಯ ಅರಣ್ಯ ಅಧಿಕಾರಿಗಳ ಕಣ್ಗಾವಲಿನಲ್ಲಿ ನಡೆಯಬೇಕು ಎಂದು ಸೂಚಿಸಿದೆ. ಸಂಭಾಲ್ಗಢ ವ್ಯಾಪ್ತಿಯ ಅರಣ್ಯಾಧಿಕಾರಿ ಇದಕ್ಕಾಗಿ ಸೂಕ್ತ ಪ್ರದೇಶವನ್ನು ಗುರುತಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಸಾಹು ಮಾಡಿದ ತಪ್ಪು ಏನು?
ಈ ಸಾಹು ಎಂಬ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ನ್ಯಾಯಾಲಯದ ತೀರ್ಪು ಮತ್ತು ಕೋರ್ಟ್ ಕಲಾಪಗಳ ಬಗ್ಗೆ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದ. ನ್ಯಾಯಾಲಯದ ಆದೇಶದ ಮೇಲೆ ವ್ಯಂಗ್ಯ ಮಾಡಿದ್ದಕ್ಕೆ ಸಾಹು ಮೇಲೆ ನ್ಯಾಯಾಂಗ ನಿಂದನೆಯ ಸುಮೋಟೋ ಕೇಸ್ ಹಾಕಲಾಗಿತ್ತು.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸಾಹು ನಾನು ಬೇಷರತ್ ಆಗಿ ಕ್ಷಮೆಯಾಚಿಸುತ್ತೇನೆ. ನಾನು 10ನೇ ತರಗತಿವರೆಗೂ ಮಾತ್ರ ಓದಿದ್ದೇನೆ. ನನಗೆ ನ್ಯಾಯಾಲಯದ ನಿಯಮಗಳ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ. ಹೀಗಾಗಿ ತಪ್ಪಾಗಿದೆ ಎಂದು ಕೋರಿಕೊಂಡಿದ್ದಾರನೆ. ಮಾಡಿದ ತಪ್ಪಿಗಾಗಿ ಕ್ಷಮಾಪಣೆ ಕೇಳಿದ್ದನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಆದರೆ ಸಾಮಾಜಿಕ ಕಳಕಳಿಯ ಉದ್ದೇಶದಿಂದ 50 ಗಿಡಗಳನ್ನು ನೆಡುವ ಅಪರೂಪದ ಶಿಕ್ಷೆಯನ್ನು ವಿಧಿಸಲಾಗಿದೆ.