(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್) ಮಂಗಳೂರು :ಕಾರ್ಕಳಕ್ಕೆ ಅಕ್ರಮ ಮರಳು ಸಾಗಾಟ!

 ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್:-


ಕಾರ್ಕಳ: ಕಾರ್ಕಳ ಭಾಗಕ್ಕೆ ಮಂಗಳೂರಿನಿಂದ ವ್ಯಾಪಕವಾಗಿ ಅಕ್ರಮವಾಗಿ ಮರಳು ಸಾಗಿಸುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಕಾರ್ಕಳ ಪೊಲೀಸರ ಬಿರುಸಿನ ಕಾರ್ಯಾಚರಣೆ ಯಲ್ಲಿ ತೊಡಗಿದ್ದಾರೆ.

ಹಿಂದಿನಿಂದಲೂ ಕಾರ್ಕಳ ಭಾಗದಲ್ಲಿ ಕಟ್ಟಡ, ಮನೆ ಸಹಿತ ಹಲವು ನಿರ್ಮಾಣ ಕಾರ್ಯಗಳಿಗೆ ಮಂಗಳೂರಿನ ವಿವಿಧ ಕಡೆಗಳಿಂದ ಮರಳನ್ನು ಸಾಗಿಸುವ ಪ್ರಮಾಣ ಹೆಚ್ಚಿದ್ದು, ಇದರಲ್ಲಿ ಅಕ್ರಮದ ಮೂಲಕವೇ ಹೆಚ್ಚಿನ ಪ್ರಮಾಣದಲ್ಲಿ ಮರಳನ್ನು ಸಾಗಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಮಂಗಳೂರು ಭಾಗದಲ್ಲಿ ಅಕ್ರಮವಾಗಿ ಮರಳು ತೆಗೆದು ಅದನ್ನು ಕಾರ್ಕಳ ಪ್ರದೇಶಗಳಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಾರೆ. ಇದನ್ನು ಬೇರೆ ಬೇರೆ ಮಾರ್ಗಗಳಲ್ಲಿ ತಲುಪಿಸಲಾಗುತ್ತದೆ. ಪೊಲೀಸ್‌ ಇಲಾಖೆ ಈ ಬಗ್ಗೆ ಪೂರ್ವ ತಯಾರಿ ನಡೆಸಿ ಹಲವೆಡೆ ಮರಳು ಸಹಿತ ಟಿಪ್ಪರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸುತ್ತಿದೆ. ಆದರೆ, ದಂಧೆ ಮಾತ್ರ ಮುಂದುವರಿಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಿಗೆ ದಾಖಲೆ, ರಾಯಧನ ದಾಖಲೆ, ಜಿಪಿಎಸ್‌ ಅಳವಡಿಕೆ ಸಹಿತ ಗಣಿ ಇಲಾಖೆಗೆ ಸಂಬಂಧಿಸಿ ಮೊದಲಾದ ಕಾನೂನು ಕ್ರಮಗಳನ್ನು ವಾಹನಗಳು ಪಾಲಿಸುತ್ತಿಲ್ಲ.

ಚೆಕ್‌ಪೋಸ್ಟ್‌ , ಒಳರಸ್ತೆಗಳಲ್ಲಿ ನಿಗಾ
ಕಾರ್ಕಳ ನಗರ, ಗ್ರಾಮಾಂತರ ಪೊಲೀಸರು ಗಸ್ತು ಕಾರ್ಯಾಚರಣೆ ವೇಳೆ ಗಣಿ ಅಕ್ರಮಕ್ಕೆ ಸಂಬಂಧಿಸಿ ಹಲವು ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ. ಇತ್ತೀಚೆಗೆ ಕಾರ್ಕಳ ಕುಕ್ಕುಂದೂರು ಸರ್ವಜ್ಞ ನಗರ ಸರ್ಕಲ್‌, ಬೆಳ್ಮಣ್‌ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ದ್ವಾರದ ಬಳಿ ಕೌಡೂರು ಕಂಪನ ಎಂಬಲ್ಲಿ ಅಕ್ರಮ ಮರಳು ಸಾಗಾಟದ ಟಿಪ್ಪರ್‌ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಚೆಕ್‌ಪೋಸ್ಟ್‌ ಮೂಲಕ ರಾತ್ರಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಒಳರಸ್ತೆಗಳಲ್ಲಿಯೂ ಪೊಲೀಸ್‌ ಇಲಾಖೆ ನಿಗಾವಹಿಸಿದೆ.



PGK

Post a Comment

Previous Post Next Post