ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್-ಮಂಗಳೂರು: ಪತ್ನಿಯನ್ನು ಗುಂಡಿಕ್ಕಿ ಕೊಂದು ನಂತರ ರಬ್ಬರ್ ಸಂಸ್ಕರಣೆಗೆ ಬಳಸುವ ಆ್ಯಸಿಡ್ ಸೇವಿಸಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ. ರಾಮಚಂದ್ರಗೌಡ ಕಳೆದ ರಾತ್ರಿ ತನ್ನ ಪತ್ನಿ ವಿನೋದಾ ಕುಮಾರಿಗೆ ಗುಂಡಿಕ್ಕಿ ಕೊಂದಿದ್ದಾನೆ. ನಂತರ ರಬ್ಬರ್ ಆ್ಯಸಿಡ್ ಸೇವಿಸಿ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯವ್ಯಸನಿಯಾಗಿದ್ದ ರಾಮಚಂದ್ರಗೌಡ ಕುಡಿದು ಮನೆಗೆ ಬಂದು ತನ್ನ ಪೋಷಕರು, ಪತ್ನಿ ಮತ್ತು ಮಗ ಸೇರಿದಂತೆ ತನ್ನ ಕುಟುಂಬ ಸದಸ್ಯರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದನು. ನಿನ್ನೆ ಸಹ ಕುಡಿದು ಮನೆಗೆ ಬಂದಿದ್ದ ಗೌಡ ವಿನೋದಾ ಕುಮಾರಿ ಜೊತೆ ಜಗಳವಾಡಿದ್ದಾನೆ. ನಂತರ ಮಾತುಗಳು ವಿಕೋಪಕ್ಕೆ ತಿರುಗಿ ಆತ ಮನೆಯಲ್ಲಿದ್ದ ಬಂದೂಕಿನಿಂದ ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಳ್ಯ ಪೊಲೀಸರು ಕೊಲೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ತಿಳಿಸಿದ್ದಾರೆ.