ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್:-
ಮಂಗಳೂರು/ವಯನಾಡು : ವಯನಾಡಿನ ಪಂಚರಕೊಲ್ಲಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿ ತಿಂದಿದ್ದ ಹುಲಿ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ
ನಾಲ್ಕರಿಂದ ಐದು ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೋಮವಾರ ಬೆಳಗ್ಗೆ ವನ್ಯಜೀವಿ ಸಿಬ್ಬಂದಿಯ ತಂಡ ಗುರುತಿಸಿ ಬೆನ್ನಟ್ಟಿದ್ದು, ನಂತರ ಪಿಲಕಾವುವಿನ ಜನನಿಬಿಡ ಪ್ರದೇಶದ ಮನೆಯೊಂದರ ಹಿಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಅರಣ್ಯ ಅಧಿಕಾರಿಗಳು ಹುಲಿಯ ಕುತ್ತಿಗೆಯಲ್ಲಿ ಹೊಸತಾದ ಮತ್ತು ಆಳವಾದ ಗಾಯಗಳು ಪತ್ತೆಯಾಗಿದ್ದು, ಅದು ಸಾವಿಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ. ಕಾಡಿನಲ್ಲಿ ಮತ್ತೊಂದು ಹುಲಿಯೊಂದಿಗೆ ಕಾದಾಟದ ಸಂದರ್ಭದಲ್ಲಿ ಈ ಗಾಯಗಳು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?
ಜನವರಿ 24ರಂದು, ಪಂಚರಕೊಲ್ಲಿಯಲ್ಲಿ ಹುಲಿ ದಾಳಿಯಲ್ಲಿ ಬುಡಕಟ್ಟು ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಅರಣ್ಯ ವೀಕ್ಷಕ ಅಪ್ಪಚ್ಚನ್ ಅವರ ಪತ್ನಿ ರಾಧಾ ಬೆಳಿಗ್ಗೆ 8:30 ರ ಸುಮಾರಿಗೆ ತೋಟದಲ್ಲಿ ಕಾಫಿ ಕೆಲಸದಲ್ಲಿ ತೊಡಗಿದ್ದಾಗ ದಾಳಿಗೆ ಒಳಗಾಗಿದ್ದರು.
ನಿಯಮಿತ ತಪಾಸಣೆ ನಡೆಸುತ್ತಿದ್ದ ಥಂಡರ್‌ಬೋಲ್ಟ್ ತಂಡವು ರಾಧಾ ಅವರ ದೇಹವನ್ನು ಪತ್ತೆ ಹಚ್ಚಿತ್ತು. ಮಹಿಳೆಯ ದೇಹವನ್ನು ಭಾಗಶಃ ತಿಂದು ಹಾಕಿದ್ದರಿಂದ ಆರಂಭದಲ್ಲಿ ಯಾರು ಎಂದು ಗುರುತು ಹಿಡಿಯಲು ಸಾಧ್ಯವಾಗಿರಲಿಲ್ಲ. ನಂತರ ತಪಾಸಣೆಗೆ ಬಂದಿದ್ದ ಅಧಿಕಾರಿಗಳು ಅರಣ್ಯ ವೀಕ್ಷಕ ಅಪ್ಪಚ್ಚನ್ ಅವರ ಪತ್ನಿ ರಾಧಾ ಅವರ ದೇಹ ಎಂದು ಪತ್ತೆ ಮಾಡಿದ್ದರು.
ಈ ಘಟನೆಯ ಬಳಿಕ ಸ್ಥಳಿಯರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರವು ಹುಲಿಯನ್ನು ‘ನರಭಕ್ಷಕ’ ಎಂದು ಘೋಷಿಸಲು ಮತ್ತು ಅದನ್ನು ಕೊಲ್ಲಲು ಆದೇಶಿಸುವಂತೆ ಒತ್ತಾಯಿಸಲಾಯಿತು. ತೀವ್ರ ಪ್ರತಿಭಟನೆಯ ಬಳಿಕ, ದಾಳಿಗೆ ಕಾರಣವಾದ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಅಧಿಕಾರಿಗಳು ಆದೇಶ ಹೊರಡಿಸಿದರು. ನರಹಂತಕ ಹುಲಿಗಾಗಿ ಪಿಲಕ್ಕಾವು ಪ್ರದೇಶದಲ್ಲಿ ಹುಡುಕಾಟವು ಶುರುವಾಗಿತ್ತು. ಆದರೆ, ನಿನ್ನೆ ಬೆಳಗಿನ ಜಾವ ಪಿಲಕ್ಕಾವು ಪ್ರದೇಶದಲ್ಲಿ ನರಭಕ್ಷಕ ಹುಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳಿಯರು ನಿಟ್ಟುಸಿರು ಬಿಟ್ಟಿದ್ದಾರೆ.