ರಾಮನಗರ:
"ತೆಗೆದುಕೊಂಡಿದ್ದು 6 ಲಕ್ಷ 9 ವರ್ಷದಲ್ಲಿ 9 ಲಕ್ಷ ಕಟ್ಟಿದ್ದೇನೆ. ಇನ್ನು 60 ವರ್ಷ ಕಂತುಗಳನ್ನು ಕಟ್ಟಬೇಕಂತೆ. 45 ಲಕ್ಷ ಬಾಕಿ ಇದೆ ಎನ್ನುತ್ತಾರೆ. ಈಗ ನಾನೇನು ಮಾಡಬೇಕು ಹೇಳಿ. ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಸಾಲ ಮಾಡಿ ಕಟ್ಟಿರುವ ಮನೆಗೆ ಬೀಗ ಹಾಕಿ ನಾವು ಊರು ಬಿಡಬೇಕು. ಹೀಗೆ, ಕಣ್ಣೀರಿಟ್ಟು ಮಾತು ನಿಲ್ಲಿಸಿದ್ದು ರಾಮನಗರದ ಲಿಂಗೇಶ್.
ಇಷ್ಟು ಮಾತ್ರವಲ್ಲದೇ, ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಾಟ ತಾಳಲಾರದೆ ರಾಮನಗರದ ಕೂನಮುದ್ದನಹಳ್ಳಿ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಕುಟುಂಬಗಳು ಊರು ಬಿಟ್ಟಿದ್ದಾರೆ. ಈಗ ಆ ಕುಟುಂಬಗಳಿದ್ದ ಕೆಲ ಮನೆಗಳಿಗೆ ಬೀಗ ಜಡಿದಿದ್ದರೆ, ಉಳಿದ ಮನೆಗಳಲ್ಲಿ ವೃದ್ಧರಷ್ಟೆ ಉಳಿದುಕೊಂಡಿರುವ ಕರುಣಾಜನಕ ಕಥೆ ಇದು.
ಖಾಸಗಿ ಕಂಪನಿಗಳಿಂದ ಸಾಲ ಪಡೆದಿದ್ದ ರೈತರು, ಮಹಿಳೆಯರು ಸಾಲ ವಾಪಸ್ ಕೊಡಲು ಆಗದೆ ಕರು, ಕುರಿ ಮಾರಿ ಉಳಿದ ಸಾಲ ತೀರಿಸಲಾಗದೆ ವಲಸೆ ಹೊರಟಿದ್ದಾರೆ. ವೃದ್ಧ ತಂದೆ, ತಾಯಿಯನ್ನೂ ಬಿಟ್ಟು ಮಕ್ಕಳು ಗ್ರಾಮ ತೊರೆಯುತ್ತಿರುವುದರಿಂದ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮನೆ ಮಕ್ಕಳು ಹೋದಾಗಿನಿಂದ ನೆಮ್ಮದಿ ಇಲ್ಲವೆಂದು ವೃದ್ಧರು ಅಳಲು ತೋಡಿಕೊಳ್ಳುತ್ತಿದ್ದಾರೆ.
ನಾಲ್ಕು ಜನರ ಗ್ರೂಪ್ ಮಾಡಿ ಸಾಲ:
ಗ್ರಾಮದಲ್ಲಿನಾಲ್ಕು ಜನರ ಗ್ರೂಪ್ ಮಾಡಿ ಸಾಲ ಕೊಟ್ಟಿದ್ದ ಫೈನಾಸ್ಸ್ ಕಂಪನಿಗಳು ವಸೂಲಿಗೆ ಅನ್ಯ ಮಾರ್ಗಗಳನ್ನು ಅನುಸರಿಸಿ ಕಿರುಕುಳು ಕೊಡುತ್ತಿವೆ. ಕೆಲ ಮನೆಗಳಿಗೆ ಪೇಪರ್ ಕಟಿಂಗ್ ಅಂಟಿಸಿದ್ದಾರೆ. ಯಾರೇ ಒಬ್ಬರು ಕಟ್ಟದೇ ಹೋದರೂ ಏಜೆಂಟರು ಹಣ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಹಣ ಕಟ್ಟೋದಕ್ಕೆ ಆಗದೆ ರಾತ್ರೋರಾತ್ರಿ ಗ್ರಾಮಸ್ಥರು ಮನೆ ಬಿಟ್ಟಿದ್ದಾರೆ.
ಮಕ್ಕಳ ವಿದ್ಯಾಭ್ಯಾಸವೂ ಮೊಟಕು:
ಸಾಲ ತೀರಿಸಲಾಗದೆ ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿ ತಲೆಮರೆಸಿಕೊಂಡಿವೆ. ಹಲವೆಡೆ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜತೆ ಕರೆದೊಯ್ದಿದ್ದಾರೆ. ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕಾಗಿದೆ.
ಸಾಲ ಪಡೆದವರಲ್ಲಿ ಕೆಲವರು ವಾಪಸ್ ಸಾಲ ಕಟ್ಟುತ್ತಿದ್ದಾರೆ. ಕೂಲಿ ಸಿಗದ ಕಾರಣ ಅನೇಕ ಬಡ ಕುಟುಂಬಗಳು ಸಾಲ ತೀರಿಸಲು ಆಗುತ್ತಿಲ್ಲ. ನಿರ್ದಿಷ್ಟ ಆದಾಯದ ಮೂಲ ಇಲ್ಲದ ಬಡ ಕುಟುಂಬಗಳು ಕೂಲಿ ಸಿಗದಿದ್ದರೆ ವಾರದ ಹಣಕಾಸಿನ ಲೆಕ್ಕಾಚಾರ ಉಲ್ಟಾ ಆಗುತ್ತದೆ. ಇದರಿಂದಾಗಿ ಸಾಲ ಪಾವತಿ ಸಾಧ್ಯವಾಗುತ್ತಿಲ್ಲ. ಸಾಲ ಕೊಟ್ಟವರು ಸಬೂಬು ಕೇಳದೆ ಮರು ಪಾವತಿಗೆ ಕಿರುಕುಳು ನೀಡುತ್ತಿದ್ದಾರೆ. ಹೀಗಾಗಿ ಸಾಲಕ್ಕೆ ಇಡೀ ಊರು ಖಾಲಿ ಆಗಿದೆ. ಮೊನ್ನೆ ಸಂಬಂಧಿಕರು ಮೃತ ಪಟ್ಟಿದ್ದರೂ ಸಹ ಅವರ ಮುಖ ನೋಡಲು ಸಹ ಊರು ಬಿಟ್ಟವರು ವಾಪಸ್ ಬರಲಿಲ್ಲಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.