(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್) shimoga | ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ : ಶಿವಮೊಗ್ಗ ಡಿಸಿ ಖಡಕ್ ವಾರ್ನಿಂಗ್!

 ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್..


ಶಿವಮೊಗ್ಗ (shivamogga), ಜ. 29: ಶಿವಮೊಗ್ಗ – ಭದ್ರಾವತಿ ತಾಲೂಕುಗಳ ವ್ಯಾಪ್ತಿಯಲ್ಲಿ ಹರಿಯುವ, ತುಂಗಭದ್ರಾ ನದಿ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

ಜ. 29 ರಂದು ಶಿವಮೊಗ್ಗ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತುಂಗಭದ್ರಾ ನದಿಯಲ್ಲಿ ಯಾಂತ್ರಿಕ ದೋಣಿ ಬಳಸಿ, ಅನದಿಕೃತ ಮರಳು ಗಣಿಗಾರಿಕೆ ನಡೆಸುತ್ತಿರುವ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.

ಬ್ಲಾಕ್ ಗಳಿಂದ ಮರಳು ಸಾಗಾಣಿಕೆ ನಡೆಸುವ ಗುತ್ತಿಗೆದಾರರು, ತಮ್ಮ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್ ಅಳವಡಿಸಿರಬೇಕು. ಸ್ವಂತದ್ದಾಗಿರುವ ವೇಬ್ರಿಡ್ಜ್‌ ಹೊಂದಿರಬೇಕು. ಎನ್.ಜಿ.ಟಿ. ನಿಯಮಾನುಸಾರ ಯಂತ್ರಗಳನ್ನು ಬಳಸಬಾರದು.

ಮಾನವ ಸಂಪನ್ಮೂಲವನ್ನೇ ಬಳಸಿ ಗಣಿಗಾರಿಕೆ ನಡೆಸಬೇಕು. ಐ.ಎಲ್ಎಂ.ಎಸ್. ನೋಂದಣಿ ಕಡ್ಡಾಯವಾಗಿ ಮಾಡಿಕೊಂಡಿರಬೇಕು. ಹಾಗೂ ಮರಳು ದಾಸ್ತಾನಿಗೆ ಸ್ಥಳವನ್ನು ಹೊಂದಿರಬೇಕು ಎಂದು ಸೂಚಿಸಿದ್ದಾರೆ.

ಹಂಚಿಕೆಗೆ ಸೂಚನೆ : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲಭ್ಯವಿರುವ ಮರಳು ಬ್ಲಾಕ್‌ಗಳನ್ನು, ಸರ್ಕಾರದ ವಿವಿಧ ಕಾಮಗಾರಿಗಳಿಗೆ ಹಾಗೂ ಇನ್ನಿತರೆ ಕಾಮಗಾರಿಗಳಿಗೆ, ಸರ್ಕಾರದ ಮರಳು ನೀತಿಯ ನಿಬಂಧನೆಗಳಿಗೊಳಪಟ್ಟು, ಇಲಾಖೆಗಳಿಗೆ ಕಾಯ್ದಿರಿಸಲು ಜಿಲ್ಲಾ ಸಮಿತಿಗೆ ಇರುವ ಪ್ರದತ್ತ ಅಧಿಕಾರವನ್ನು ಬಳಸಿ, ಗಣಿಗಳನ್ನು ನೀಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.

ಗಣಿಯನ್ನು ಕಾಯ್ದಿರಿಸಲು ಇಲಾಖಾಧಿಕಾರಿಗಳು ಸಲ್ಲಿಸಿದ ಕೋರಿಕೆಯನ್ನು ಪರಿಶೀಲಿಸಿ,, ತಮ್ಮ ಕೋರಿಕೆಯ ಗಣಿಯನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗುವುದು. ಹಾಗೆಯೇ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು, ಬೇಕಾದ ಮರಳಿನ ಪ್ರಮಾಣವನ್ನು ಲಿಖಿತವಾಗಿ ಬರೆದುಕೊಡಬೇಕು. ಗಣಿಯನ್ನು ದು‍ರ್ಬಳಕೆ ಮಾಡಿದಲ್ಲಿ ಸಂಬಂಧಿಸಿದ ಇಲಾಖಾ ಮುಖ್ಯಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಮರಳನ್ನು ಉದ್ದೇಶಿಕ ಕಾ‍ರ್ಯಕ್ಕೆ ಬಳಸಿಕೊಳ್ಳಬೇಕು. ನೆರೆಯ ಜಿಲ್ಲೆಗಳಿಗೆ ರವಾನಿಸಿದಲ್ಲಿ, ದುರ್ಬಳಕೆ ಮಾಡಿಕೊಂಡ ಬಗ್ಗೆ ಮಾಹಿತಿ ದೊರೆತಲ್ಲಿ ಅಂತಹ ಅಧಿಕಾರಿ-ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು.

ಮರಳು ಗಣಿಗಾರಿಕೆ ಕೈಗೊಳ್ಳುವ ಸ್ಥಳದಲ್ಲಿ ಸಿ.ಸಿ.ಕ್ಯಾಮರಾಗಳ ಅಳವಡಿಕೆ ಮಾಡಿಕೊಳ್ಳಬೇಕು. ಅಗತ್ಯವಿರುವಾಗ ಸಿಸಿ.ಕ್ಯಾಮರಾ ಚಿತ್ರೀಕರಣದ ಪ್ರತಿಯನ್ನು ಸಂಬಂದಿಸಿದ ಇಲಾಖೆಗೆ ಒದಗಿಸಲು ಬದ್ದರಾಗಿರಬೇಕು ಎಂದು ಸೂಚಿಸಿದ್ದಾರೆ.

ಕಾಯ್ದಿರಿಸಿದ ಗಣಿಗಳಲ್ಲದೆ, ಉಳಿದ ಗಣಿಗಳನ್ನು ನಿಯಮಾನುಸಾರ ವಿಲೇ ಮಾಡುವಂತೆ ಜಿಲ್ಲಾ ಹಿರಿಯ ಭೂವಿಜ್ಞಾನಿಗಳಿಗೆ ಜಿಲ್ಲಾಧಿಕಾರಿಗಳು ಇದೇ ವೇಳೆ ಸೂಚಿಸಿದ್ದಾರೆ.

ಸಿಬ್ಬಂದಿ ನೇಮಕ : ಮರಳು ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಸುರಕ್ಷತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ಜವಾಬ್ದಾರಿಯುತ ಅಧಿಕಾರಿಗಳೇ ನಿರ್ವಹಣೆಯ ಹೊಣೆ ಹೊರಬೇಕು. ಗಣಿಗಳ ಉಸ್ತುವಾರಿಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳನ್ನು ನಿಯೋಜಿಸುವಂತೆ ಹಾಗೂ ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ಅವರು ಹೇಳಿದರು.

ಈ ಹಿಂದೆ ಗಣಿಯನ್ನು ಪಡೆದುಕೊಂಡಿದ್ದ ಪಂಚಾಯತ್‌ ರಾಜ್‌ ಇಲಾಖೆಯಿಂದ ಕಾಲಕಾಲಕ್ಕೆ ಇಲಾಖೆಗೆ ಸರಿಯಾದ ಮಾಹಿತಿ ನೀಡಿರುವುದಿಲ್ಲ. ಆದ್ದರಿಂದ ಅವರಿಗೆ ತಿಳುವಳಿಕೆ ನೀಡಬೇಕಲ್ಲದೆ ನೀಡಿರುವ ಗಣಿಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದೆಂದು ನುಡಿದರು.

ಜಿಲ್ಲೆಯ ಎಲ್ಲಾ ಗಣಿಗಳ ಸಮರ್ಪಕ ನಿರ್ವಹಣೆಯ ಕುರಿತು ಆಯಾ ಪಂಚಾಯಿತಿ ವ್ಯಾಪ್ತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇಲಾಖಾ ನಿಯಮ ಅನುಸರಿಸುತ್ತಿರುವ ಬಗ್ಗೆ ವಿಶೇಷ ಗಮನಹರಿಸಬೇಕಲ್ಲದೆ ಸಂಬಂಧಿಸಿದ ಕಂದಾಯ ಹಾಗೂ ಪೊಲೀಸ್‌ ಇಲಾಖಾಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಬೇಕೆಂದವರು ಸೂಚಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಎತ್ತುವಳಿ ಮಾಡಿ ಆಂತರಿಕ ಸ್ಥಳಗಳಲ್ಲಿನ ನದಿ ಪಾತ್ರಗಳಲ್ಲಿ ದಾಸ್ತಾನು ಮಾಡಲಾಗುವ ಮರಳನ್ನು ಜಪ್ತಿ ಮಾಡಿ, ವಶಪಡಿಸಿಕೊಂಡು ವಿಲೇವಾರಿ ಮಾಡಲು ಹಾಗೂ ದರ ನಿಗಧಿಪಡಿಸಿಕೊಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಉಪಕಾರ್ಯದಶಿ ಶ್ರೀಮತಿ ಜಯಲಕ್ಷ್ಮಮ್ಮ, ಹಿರಿಯ ಭೂವಿಜ್ಞಾನಿ ಟಿ.ಕೆ.ನಾಯಕ್‌ ಸೇರಿದಂತೆ ಸಂಬಂದಿಸಿದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


PGK

Post a Comment

Previous Post Next Post