ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್..
ಶಿವಮೊಗ್ಗ (shivamogga), ಫೆ. : ‘ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ವಸೂಲಿ ಮಾಡುವ ವೇಳೆ ದೌರ್ಜನ್ಯ, ಕಿರುಕುಳ ನೀಡಿದರೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ದೂರು ನೀಡಿ. ತಪ್ಪಿತಸ್ಥರ ವಿರುದ್ದ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಫೆ. ರಂದು ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಪೊಲೀಸ್ ಉಪ ವಿಭಾಗ – ಬಿ ವ್ಯಾಪ್ತಿಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೀಟ್ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು. ಗ್ರಾಮಾಂತರ ಹಾಗೂ ನಗರಕ್ಕೆ ಪ್ರತ್ಯೇಕ ಗಸ್ತು ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸ್ಮಾರ್ಟ್ ಇ ಬೀಟ್ ತಂತ್ರಾಂಶ ಅನುಷ್ಠಾನ ಮಾಡಲಾಗಿದ್ದು, ಇದರ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸಲು ವಿಳಂಬ ಮಾಡಿದಲ್ಲಿ, ನೇರವಾಗಿ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ. ಗಾಂಜಾ ಸೇರಿದಂತೆ ಮಾದಕ ವಸ್ತು ಮಾರಾಟ ಹಾಗೂ ಸೇವಿಸುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ. ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳ ನಿಯೋಜಿಸಿ, ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಉಪ ವಿಭಾಗ – ಬಿ ಡಿವೈಎಸ್ಪಿ ಸಂಜೀವ್ ಕುಮಾರ್ ಟಿ, ಜಯನಗರ ಠಾಣೆ ಇನ್ಸ್’ಪೆಕ್ಟರ್ ಸಿದ್ದೇಗೌಡ, ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ ಸತ್ಯನಾರಾಯಣ, ವಿನೋಬನಗರ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಚಂದ್ರಕಲಾ ಸೇರಿದಂತೆ ಮೊದಲಾದವರಿದ್ದರು.