ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು, ₹5 ಲಕ್ಷ ವರೆಗೂ ದಂಡ: ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ - MICROFINANCE BILL 2025 PASSED

ಬೆಂಗಳೂರು: ಅನಧಿಕೃತ ಫೈನಾನ್ಸ್ ಸಂಸ್ಥೆಗಳಿಗೆ 10 ವರ್ಷ ಕಠಿಣ ಜೈಲು, 5 ಲಕ್ಷ ರೂ. ದಂಡ, ಕಪ್ಪುಹಣಕ್ಕೆ ಕಡಿವಾಣ ಹಾಗೂ ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸುವ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025 ಇಂದು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಮಂಡಿಸಿದ ಈ ವಿಧೇಯಕಕ್ಕೆ ಸುದೀರ್ಘ ಚರ್ಚೆಯ ಬಳಿಕ ವಿಪಕ್ಷಗಳ ಸಲಹೆ ಹಾಗೂ ಸಹಮತದಿಂದ ಅನುಮೋದನೆ ಸಿಕ್ಕಿತು.
in article image
ಶಾಸಕ ಲಕ್ಷಣ ಸವದಿ ಸಿಎಂ ಪರವಾಗಿ ಹೆಚ್.ಕೆ.ಪಾಟೀಲ್ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿ, ಕಿರು ಸಾಲ, ಸಣ್ಣ ಸಾಲ, ಖಾಸಗಿ ಹಣಕಾಸು ಮತ್ತು ಇತರೆ ಅನಿಯಂತ್ರಿತ ಲೇವಾದೇವಿದಾರರಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸಿ ರಕ್ಷಣೆ ನೀಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ ಎಂದು ಸದನಕ್ಕೆ ತಿಳಿಸಿದರು.ಪೊಲೀಸರಿಗೆ ಇನ್ನಷ್ಟು ಬಲ ನೀಡಿ ಕಾನೂನು ರಕ್ಷಣೆ:ಇದರಲ್ಲಿ ಸಾಲಗಳನ್ನು ಪಡೆಯುವ ಮತ್ತು ಸಾಲಗಳಲ್ಲೇ ಮುಳುಗಿ ಹೋಗಿರುವ ಅಸಹಾಯಕರನ್ನು ಕಾಪಾಡುವ ಮತ್ತು ರಕ್ಷಿಸುವ ಉದ್ದೇಶವಿದೆ. ಬಡ ಗ್ರಾಮೀಣ ನಿರ್ಗತಿಕರು, ನಗರ ಕಾರ್ಮಿಕರು, ಸಮಾಜದ ಅಶಕ್ತ ಮತ್ತು ದುರ್ಬಲ ವರ್ಗದವರನ್ನು ಪೀಡಿಸುತ್ತಿವೆ ಮತ್ತು ಉಸಿರುಗಟ್ಟಿಸುತ್ತಿವೆ. ಸಾಲಗಾರನಿಗೆ ಕೆಲವೊಮ್ಮೆ ಹೆಚ್ಚಿನ ಬಡ್ಡಿ ಪಾವತಿಸಲು ಒತ್ತಾಯಿಸಲಾಗುತ್ತಿದೆ. ಲೇವಾದೇವಿದಾರರ ಕಾರಣದಿಂದಾಗಿ ಸಾಲಗಾರರು ಬೀದಿಗೆ ಬರುವಂತೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಪಡಿಸಲಾಗುತ್ತಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಗುರಿ ಹೊಂದಲಾಗಿದೆ. ಇದರ ಜೊತೆಗೆ ಪೊಲೀಸರಿಗೆ ಇನ್ನಷ್ಟು ಬಲ ನೀಡಿ ಕಾನೂನು ರಕ್ಷಣೆ ಮಾಡಬಹುದಾಗಿದೆ ಎಂದು ಹೇಳಿದರು.30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆಂದ ಅಶೋಕ್:ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಈಗಾಗಲೇ ಇರುವ ಕಾನೂನುಗಳ ಮೂಲಕ ಫೈನಾನ್ಸ್ ದಂಧೆ ಮಾಡುವವರನ್ನು ಬಗ್ಗುಬಡಿಯಬಹುದಾಗಿತ್ತು. ಆದರೆ, ಸರ್ಕಾರ ಈಗಾಗಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದ ಬಡಜನರ ಪ್ರಾಣವೂ ನಷ್ಟವಾಯಿತು. ಅಂದಾಜಿನ ಪ್ರಕಾರ, ರಾಜ್ಯದಲ್ಲಿ ಲೇವಾದೇವಿದಾರರ ಕಿರುಕುಳಕ್ಕೆ 30 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸದನದ ಗಮನ ಸೆಳೆದರು.ರಾಜ್ಯ ಸರ್ಕಾರ ಕಾನೂನು ಜಾರಿಗೆ ಹೊರಟಿದೆ. ಇದಕ್ಕೆ ನಮ್ಮ ಸ್ವಾಗತವಿದೆ. ಆದರೆ, ಯಾವುದೇ ಕಾರಣಕ್ಕೂ ಕೋರ್ಟಿನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ಜೊತೆಗೆ, ನ್ಯಾಯಯುತವಾಗಿ ಸಾಲ ನೀಡುವ ಮಂದಿಗೂ ಹಾನಿಯಾಗದಂತೆ ಸರ್ಕಾರ ಗಮನ ನೀಡಬೇಕು ಎಂದೂ ಅಶೋಕ್ ಸಲಹೆ ನೀಡಿದರು.

 ಬಡ್ಡಿ  ವಿಧಿಸುವ ದೊಡ್ಡ ಜಾಲವೇ ಇದೆ:ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್ ಮಾತನಾಡಿ, ಈ ಫೈನಾನ್ಸ್ ಜಾಲ ತೀವ್ರವಾಗಿದೆ. ಇಸ್ಪೀಟ್ ದಂಧೆ, ಗಾಂಜಾ ಮಾಫಿಯಾ, ವೇಶ್ಯಾವಾಟಿಕೆ ದಂಧೆ, ಹೀಗೆ ಕೆಟ್ಟ ದಂಧೆಕೋರರು ಫೈನಾನ್ಸ್ ನಡೆಸುತ್ತಾರೆ. ಇದಕ್ಕೆ ಶೇ.10ರಷ್ಟು ಬಡ್ಡಿ ವಿಧಿಸುವ ದೊಡ್ಡ ಜಾಲವೇ ಇದೆ. ಇದಕ್ಕೆ ಪರೋಕ್ಷವಾಗಿ ಪೊಲೀಸರ ಕುಮ್ಮಕ್ಕು ಸಹ ಇರುತ್ತದೆ. ಹೀಗಾಗಿ, ಸರ್ಕಾರ ನಿರ್ದಿಷ್ಟ ಕಾನೂನುಗಳ ಮೂಲಕ ಬಡಜನರ ಮೇಲಿನ ದೌರ್ಜನ್ಯ ಆಗದಂತೆ ನೀಡಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಸದಸ್ಯರಾದ ಲಕ್ಷಣ ಸವದಿ, ಡಾ.ರಂಗನಾಥ, ನಂಜೇಗೌಡ, ಪ್ರತಿಪಕ್ಷದ ಸದಸ್ಯ ಸಿದ್ದು ಸವದಿ ಸೇರಿದಂತೆ ಹಲವು ಸದಸ್ಯರು ವಿಧೇಕಯಕ ಕುರಿತ ಚರ್ಚೆಯಲ್ಲಿ ಪಾಲ್ಗೊಂಡರು.

ಸದಸ್ಯರ ಸಲಹೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ.ಪಾಟೀಲ್, ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು, ವಿಶೇಷವಾಗಿ ಮಹಿಳೆಯರು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಕಾರ್ಯವ್ಯವಸ್ಥೆಯನ್ನು ಸೃಜಿಸುವ ಉದ್ದೇಶವನ್ನು ವಿಧೇಯಕ ಒಳಗೊಂಡಿದೆ ಎಂದರು.

10

 ವರ್ಷಗಳ ಜೈಲುವಾಸ: ಕಾನೂನು ಚೌಕಟ್ಟುಗಳವರೆಗೆ ಕಾರ್ಯಾಚರಣೆಗೆ ನೋಂದಾಯಿತವಲ್ಲದ ಲೇವಾದೇವಿದಾರರನ್ನು ನಿಯಂತ್ರಿಸುವುದು, ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುವುದು, ಆರ್​​ಬಿಐನ ಕಣ್ತಪ್ಪಿಗೆ ಒಳಪಡದೇ, ನೋಂದಾಯಿತವಲ್ಲದ ಮತ್ತು ಅನಿಯಂತ್ರಿತ ಲೇವಾದೇವಿದಾರರಿಗೆ ಈ ವಿಧೇಯಕ ಅನ್ವಯವಾಗಲಿದೆ. ಕಾನೂನುಬದ್ಧ ಲೇವಾದೇವಿಯನ್ನು ನಿಷೇಧಿಸುವುದಿಲ್ಲ. ಆದರೆ, ಬಲವಂತದ ವಸೂಲಾತಿಗಳನ್ನು ನಿರ್ಬಂಧಿಸುತ್ತದೆ. ಬಲವಂತದ ಹಾಗೂ ಅಮಾನವೀಯ ಸಾಲ ವಸೂಲಾತಿಯಲ್ಲಿ ತಪ್ಪಿತಸ್ಥರಿಗೆ 10 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲುವಾಸ, 5 ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡವನ್ನು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಅಧ್ಯಾದೇಶದ ಮೂಲಕ ಜಾರಿ ಮಾಡಿದ್ದ ಕಾನೂನನ್ನು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೆಚ್.ಕೆ.ಪಾಟೀಲ್ ತಿಳಿಸಿದರು.

ಬಳಿಕ ವಿಧೇಯಕಕ್ಕೆ ಆಡಳಿತ-ಪ್ರತಿಪಕ್ಷ ನಡುವೆ ಸಹಮತ ಬಂದ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದೊಂದಿಗೆ ವಿಧೇಯಕ ಅಂಗೀಕಾರಗೊಂಡಿತು.


PGK

Post a Comment

Previous Post Next Post