ಬೆಂಗಳೂರು, ಮಾರ್ಚ್ 27: ಕರ್ನಾಟಕದಲ್ಲಿ ಅರಣ್ಯದ ಪ್ರಮಾಣ ಕಡಿಮೆಯಾಗುತ್ತಿದೆ. ಒತ್ತುವರಿ ಸೇರಿದಂತೆ ಇತರ ಹಲವು ಕಾರಣಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮರಗಳನ್ನು ಉಳಿಸಲು, ಅರಣ್ಯವನ್ನು ಕಾಪಾಡಲು ಕರ್ನಾಟಕ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಕ್ರಮವಾಗಿ ಮರಗಳನ್ನು ಕಡಿಯುವುದನ್ನು ತಪ್ಪಿಸಲು ಈಗ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಇದಕ್ಕಾಗಿ ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಕುರಿತು Forest ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅಪರ ಮುಖ್ಯ ಕಾರ್ಯದರ್ಶಿಯವರು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಇವರಿಗೆ ಟಿಪ್ಪಣಿಯೊಂದನ್ನು ಕಳಿಸಿದ್ದಾರೆ. ಈ ಟಿಪ್ಪಣಿಯಲ್ಲಿ ಕಾನೂನು ತಿದ್ದುಪಡಿಯ ಕುರಿತು ವಿಷಯವನ್ನು ಪ್ರಸ್ತಾಪಿಸಲಾಗಿದೆ.
ಸಚಿವರ ಟಿಪ್ಪಣಿ: ಸಚಿವ ಈಶ್ವರ ಖಂಡ್ರೆ ತಮ್ಮ ಟಿಪ್ಪಣಿಯನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ಅರ್ಜಿಯೊಂದರ ವಿಚಾರಣೆ ವೇಳೆ ನೀಡಿದ ಅಭಿಪ್ರಾಯದೊಂದಿಗೆ ಆರಂಭಿಸಿದ್ದಾರೆ.
ಸಚಿವರ ಟಿಪ್ಪಣಿ 'Cutting down large number of trees is like killing human beings, or worse than that" ಎಂದು ಘನ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಕ್ರಮವಾಗಿ ಕತ್ತರಿಸಿದ ಪ್ರತಿ ಮರಕ್ಕೆ 1 ಲಕ್ಷ ರೂ. ದಂಡ ವಿಧಿಸಿರುವ ವಿಚಾರದಲ್ಲಿ ಕರುಣೆ ತೋರುವ ಅಗತ್ಯವಿಲ್ಲ ಎಂದು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಹೇಳಿದ್ದಾರೆ.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಇಡೀ ವಿಶ್ವ ಎದುರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಇರುವ ಒಂದೇ ಭೂಮಿಯನ್ನು ರಕ್ಷಿಸಿ, ಸುರಕ್ಷಿತವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಲು, ಪ್ರಕೃತಿ, ಪರಿಸರ ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದ್ದಾರೆ.
ಸಂಸ್ಕೃತದಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತಿದೆ. ಈಗ ಇದನ್ನು ವೃಕೋ ರಕ್ಷತಿ ರಕ್ಷಿತಃ ಎಂದು ಬದಲಾಯಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹತ್ತಾರು, ನೂರಾರು ವರ್ಷದಿಂದ ಬೆಳದ ಮರಗಳನ್ನು ಸಂರಕ್ಷಿಸದಿದ್ದರೆ ಮುಂದೆ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದ್ದಾರೆ.
ಈ ನಿಟ್ಟಿನಲ್ಲಿ ಅಕ್ರಮ ಮರ ಕಡಿತಲೆಗೆ ಪ್ರಸಕ್ತ ವಿಧಿಸಲಾಗುತ್ತಿರುವ ದಂಡ ಮತ್ತು ಶಿಕ್ಷೆಯ ಪ್ರಮಾಣವನ್ನು ಹತ್ತುಪಟ್ಟು ಹೆಚ್ಚಿಸಲು ಅನುವಾಗುವಂತೆ ವೃಕ್ಷ ಸಂರಕ್ಷಣಾ ಕಾಯಿದೆ 1972ಕ್ಕೆ ತಿದ್ದುಪಡಿ ತರಲು ಕ್ರಮ ವಹಿಸುವಂತೆ ಈ ಮೂಲಕ ಸೂಚಿಸಿದೆ ಎಂದು ಟಿಪ್ಪಣಿಯಲ್ಲಿ ಹೇಳಿದ್ದಾರೆ.
ಸಚಿವ ಈಶ್ವರ ಖಂಡ್ರೆ ತಮ್ಮ ಟಿಪ್ಪಣಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಸಹ ಹಾಕಿದ್ದಾರೆ. 'ಅಕ್ರಮ ಮರ ಕಡಿತ ತಡೆಗೆ ಕಠಿಣ ಕ್ರಮ-ದಂಡ ಮತ್ತು ಶಿಕ್ಷೆ ಹೆಚ್ಚಳಕ್ಕೆ ಕ್ರಮ. ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಅಗತ್ಯ. ಪರಿಸರ ಉಳಿಸಿ, ಭವಿಷ್ಯ ರಕ್ಷಿಸೋಣ' ಎಂದು ತಿಳಿಸಿದ್ದಾರೆ.
'ಅರಣ್ಯ ಸಂರಕ್ಷಣೆಯ ಉದ್ದೇಶದಿಂದ ವೃಕ್ಷ ಸಂರಕ್ಷಣಾ ಕಾಯಿದೆ 1972ಕ್ಕೆ ತಿದ್ದುಪಡಿ ತರಲು ಮತ್ತು ಅಕ್ರಮ ಮರಗಳ ಕಡಿತ ತಡೆಗಟ್ಟಲು ದಂಡ ಹಾಗೂ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸುಪ್ರೀಂಕೋರ್ಟ್ ಅಭಿಪ್ರಾಯದಂತೆ, ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುವುದು ಗಂಭೀರ ಅಪರಾಧ ಎಂದು ಪರಿಗಣಿಸಿ, ಪ್ರತಿ ಮರಕ್ಕೆ 1 ಲಕ್ಷ ದಂಡ ವಿಧಿಸುವ ನಿಯಮವನ್ನು ಇನ್ನಷ್ಟು ಕಠಿಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.